ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆ.ಜಿ. ಹಳ್ಳಿಯಲ್ಲಿ ಕಳೆದ ರಾತ್ರಿ ನಡೆದ ಗಲಭೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಮೂವರು ಮೃತಪಟ್ಟಿದ್ದಾರೆ. ದುಷ್ಕರ್ಮಿಗಳು ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸ ಹಾಗೂ ಕಚೇರಿಗೆ ಬೆಂಕಿ ಹಚ್ಚಿರುವುದಲ್ಲದೆ ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿ ಮಾಡಿದ್ದಾರೆ.
ಇದೀಗ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿರುವುದರ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುರುತರ ಆರೋಪವೊಂದನ್ನು ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಗಲಭೆ ಹಿಂದೆ ಮಾಜಿ ಸಚಿವರೊಬ್ಬರ ಕೈವಾಡವಿದೆ ಎಂದು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಗಲಭೆಗೆ ವ್ಯವಸ್ಥಿತ ಸಂಚು ನಡೆದಿದೆ. ಎಸ್.ಡಿ.ಪಿ.ಐ. ಸಂಘಟನೆಯ ಕೈವಾಡವಿದ್ದು, ಜೊತೆಗೆ ಮಾಜಿ ಸಚಿವರೊಬ್ಬರು ಕುಮ್ಮಕ್ಕು ನೀಡಿದ್ದಾರೆ ಎಂದು ಹೇಳಿದ್ದಾರೆ.