ಮೈಸೂರು: ಕೊರೊನಾ ಭೀತಿ ನಡುವೆ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಜಂಬೂ ಸವಾರಿ ಅರಮನೆಗೆ ಮಾತ್ರ ಸೀಮಿತವಾಗಿದ್ದು, ಮಧ್ಯಾಹ್ನ 2:59 ರಿಂದ 3:20 ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮೈಸೂರು ಅರಮನೆ ಆವರಣದಲ್ಲಿರುವ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಯಡಿಯೂರಪ್ಪ, ಬಳಿಕ 3:40 ರಿಂದ 4:1 5ರೊಳಗೆ ಶುಭ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿರುವ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.
ಅಭಿಮನ್ಯು ಆನೆ ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಸಾಗಿದೆ. ಅಭಿಮನ್ಯುಗೆ ಕುಮ್ಕಿ ಆನೆಗಳು ಸಾಥ್ ನೀಡಿವೆ. ಈ ಬಾರಿ ಜಂಬೂ ಸವಾರಿ ಮೆರವಣಿಗೆ 400 ಮೀಟರ್ ವರೆಗೆ ಮಾತ್ರ ಸಾಗಲಿದೆ. ಈ ಬಾರಿ ಕೇವಲ 30-40 ನಿಮಿಷಗಳವರೆಗೆ ಮಾತ್ರ ಮೆರವಣಿಗೆ ನಡೆಯಲಿದೆ.
ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸುವ ಸ್ತಬ್ಧಚಿತ್ರ, ಅಶ್ವಾರೋಹಿ ದಳದ 2 ತುಕಡಿ, ಕರ್ನಾಟಕ ಪೊಲೀಸ್ ಬ್ಯಾಂಡ್ ನ ಆನೆಗಾಡಿ, ಸಾಂಸ್ಕೃತಿಕ ಕಲಾತಂಡಗಳು ಭಾಗಿಯಾಗಿವೆ.