ಕೊರೊನಾ ಮಹಾಮಾರಿ ಹಿನ್ನಲೆಯಲ್ಲಿ ಕಳೆದ ಮಾರ್ಚ್ ತಿಂಗಳಿನಿಂದ ಮುಚ್ಚಲ್ಪಟ್ಟಿರುವ ಶಾಲೆಗಳು ಈ ವರ್ಷದ ಅಂತ್ಯದವರೆಗೂ ತೆರೆಯುವುದಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಈ ವಿಚಾರವನ್ನು ತಿಳಿಸಿದ್ದು, ಡಿಸೆಂಬರ್ ಕೊನೆಯಲ್ಲಿ ಮತ್ತೊಮ್ಮೆ ಚರ್ಚೆ ನಡೆಸಿ ಶಾಲೆ ಆರಂಭದ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೊರೊನಾಗೆ ಲಸಿಕೆ ಇನ್ನೂ ಲಭ್ಯವಾಗದಿದ್ದರೂ ಸಹ ಶಾಲೆಗಳನ್ನು ಆರಂಭಿಸುವ ಕುರಿತು ಚರ್ಚೆ ಆರಂಭವಾಗಿತ್ತು.
ಆದರೆ ಇದಕ್ಕೆ ಬಹುತೇಕ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಲ್ಲದೇ ಕೊರೊನಾ ಲಸಿಕೆ ಲಭ್ಯವಾಗುವವರೆಗೂ ಶಾಲೆ ಆರಂಭಿಸುವುದು ಬೇಡ ಎಂದು ಒತ್ತಾಯಿಸಿದ್ದರು.
ಅಲ್ಲದೇ ತಜ್ಞರ ಸಮಿತಿ ಕೂಡಾ ಕೊರೊನಾ ಎರಡನೇ ಅಲೆ ಆರಂಭವಾಗುವ ಸಾಧ್ಯತೆ ಇರುವುದರಿಂದ ಡಿಸೆಂಬರ್ ನಲ್ಲಿ ಶಾಲೆ ಆರಂಭಿಸುವುದು ಸೂಕ್ತವಲ್ಲವೆಂದು ಹೇಳಿತ್ತು.
ಹೀಗಾಗಿ ಡಿಸೆಂಬರ್ ಅಂತ್ಯದವರೆಗೂ ಶಾಲೆಗಳನ್ನು ಆರಂಭಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಆದರೆ ಈ ಮೊದಲಿನಂತೆ ಆನ್ ಲೈನ್ ಶಿಕ್ಷಣ ಮುಂದುವರೆಯಲಿದೆ.