ಹುಬ್ಬಳ್ಳಿ: ಕೊರೊನಾ ಭೀತಿಯಿಂದಾಗಿ ಶಾಲಾ-ಕಾಲೇಜುಗಳು ಇಲ್ಲದಿರುವುದರಿಂದ ಮಕ್ಕಳು ಸಂಪೂರ್ಣವಾಗಿ ಪಬ್ ಜಿ ಸೇರಿದಂತೆ ವಿವಿಧ ಗೇಮ್ ಗಳಿಗೆ ಅಡಿಕ್ಟ್ ಆಗಿದ್ದು, ಗೇಮ್ ಅಡಿಕ್ಷನ್ ಮಕ್ಕಳನ್ನೇ ಬಲಿ ಪಡೆಯುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಪಬ್ ಜಿ ಗೇಮ್ ಆಡಲು ಇಂಟರ್ ನೆಟ್ ಹಾಕಿಸಿಲ್ಲ ಎಂಬ ಕಾರಣಕ್ಕೆ ವಿಷ ಕುಡಿದಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಭಾರತ-ಚೀನಾ ಗಡಿ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸರ್ಕಾರ ಪಬ್ ಜಿ ಸೇರಿದಂತೆ ನೂರಕ್ಕೂ ಹೆಚ್ಚು ಗೇಮ್ ಗಳನ್ನು ನಿಷೇಧಿಸಿದೆ. ಈ ನಡುವೆ ಪಬ್ ಜಿ ಗೇಮ್ ಇಲ್ಲೊಬ್ಬ ಬಾಲಕನನ್ನೇ ಬಲಿ ಪಡೆದುಕೊಂಡಿದೆ. ಹೌದು. ಪಬ್ ಜಿ ಗೇಮ್ ಆಡಲು ನೆಟ್ ಪ್ಯಾಕ್ ಹಾಕಿಸಿಲ್ಲ ಎಂದು ಪೋಷಕರ ವಿರುದ್ಧ ಬೇಸತ್ತಿದ್ದ ಹಾವೇರಿಯ ಸಂಗೂರು ಗ್ರಾಮದ 17 ವರ್ಷದ ತೇಜಸ್ ಆ.31ರಂದು ವಿಷ ಸೇವಿಸಿದ್ದ.
ಆತನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಸಾವು-ಬದುಕಿನ ನಡುವೆ ಹೋರಾಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾನೆ.