ಹಾಸನದಿಂದ 38 ಕಿ.ಮೀ. ದೂರದಲ್ಲಿ ಯಗಚಿ ನದಿಯ ದಂಡೆಯ ಮೇಲಿರುವ ಬೇಲೂರು ಜಗತ್ಪ್ರಸಿದ್ಧ ಪ್ರವಾಸಿ ತಾಣ. ಹಿಂದೆ ಇದು ಹೊಯ್ಸಳರ ರಾಜಧಾನಿಯಾಗಿತ್ತು. ಇತಿಹಾಸದ ಬೇರೆ ಬೇರೆ ಕಾಲದಲ್ಲಿ ವೇಲಾಪುರ, ವೇಲೂರು ಮತ್ತು ಬೇಲಾಪುರವೆಂಬ ಹೆಸರುಗಳಿಂದ ಕರೆಯಲ್ಪಡುತ್ತಿತ್ತು.
ಹೊಯ್ಸಳ ಶಿಲ್ಪಕಲೆಯ ಅತ್ಯಂತ ಸುಂದರ ಉದಾಹರಣೆ ಎಂದರೆ ಚೆನ್ನಕೇಶವ ದೇವಸ್ಥಾನ. ಕ್ರಿ.ಶ.1116ರಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನು ಚೋಳರ ವಿರುದ್ಧ ಸಾಧಿಸಿದ ವಿಜಯದ ದ್ಯೋತಕವಾಗಿ ಈ ದೇಗುಲವನ್ನು ನಿರ್ಮಿಸಿ, ವಿಜಯ ನಾರಾಯಣ ಎಂದು ಕರೆದ.
ಅತ್ಯಂತ ಸೂಕ್ಷ್ಮವಾದ ಕೆತ್ತನೆಗಳಿಗಾಗಿ ಕಟ್ಟಡಗಳಿಗೆ ಹೊಯ್ಸಳರು ಮೃದು ಬಳಪದ ಕಲ್ಲನ್ನು ಬಳಸಿದ್ದರು. ದೇವಸ್ಥಾನವು ವಿಜಯನಗರ ಶೈಲಿಯಲ್ಲಿ ಗೋಪುರದಿಂದ ಕೂಡಿದ ಒಂದು ದೊಡ್ಡ ಪ್ರಾಕಾರದಿಂದ ಸುತ್ತುವರೆದಿದ್ದು, ದೇವಸ್ಥಾನವು ಒಂದು ಜಗುಲಿಯ ಮೇಲೆ ನಿಂತಿದೆ.
ಗರ್ಭಗೃಹವು ನಕ್ಷತ್ರಾಕಾರವಾಗಿದ್ದು, ಹಗಲಿನ ಬೇರೆ ಬೇರೆ ಹೊತ್ತಿನ ಗರ್ಭಗೃಹದ ಅಂಕುಡೊಂಕಾದ ಗೋಡೆಗಳ ಮೇಲೆ ಬಿದ್ದ ಬೆಳಕು ವಿಷ್ಣುವಿನ 24 ರೂಪಗಳನ್ನು ಬೇರೆ ಬೇರೆಯಾಗಿ ಕಾಣುವಂತೆ ಮಾಡುತ್ತದೆ.
ಹಾಸನದಿಂದ ಸುಮಾರು 38 ಕಿ.ಮೀ.ದೂರದಲ್ಲಿದೆ. ಬಸ್ ಸೇವೆಗಳು ಮತ್ತು ಟ್ಯಾಕ್ಸಿಗಳು ಹಾಸನದಿಂದ ಲಭ್ಯವಿರುತ್ತವೆ.