ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದು, ಇವರ ಜೊತೆಗೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು ಸಹ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.
ಆದರೆ ತಮ್ಮ ಹಲವು ಕಾಲದ ಬೇಡಿಕೆಗೆ ಸರ್ಕಾರ ಈವರೆಗೆ ಸ್ಪಂದಿಸಿಲ್ಲ ಎಂಬ ಅಳಲು ಆಶಾ ಕಾರ್ಯಕರ್ತೆಯರದ್ದಾಗಿದ್ದು, ಹೀಗಾಗಿ ಜೂನ್ 30ರ ನಾಳೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಒಂದೊಮ್ಮೆ ಸರ್ಕಾರ ಪ್ರತಿಭಟನೆ ಬಳಿಕವೂ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಜುಲೈ 10ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ.
ಕೊರೊನಾ ವಾರಿಯರ್ ಗಳಾಗಿ ಕೆಲಸ ಮಾಡುತ್ತಿರುವ ತಮಗೆ ಮಾಸಿಕ 12 ಸಾವಿರ ರೂ. ಗೌರವಧನ ನೀಡಬೇಕೆಂಬ ಬೇಡಿಕೆ ಆಶಾ ಕಾರ್ಯಕರ್ತೆಯರದ್ದಾಗಿದ್ದು, ಈ ಕುರಿತಂತೆ ಜನವರಿಯಿಂದ ಈವರೆಗೆ ಏಳು ಬಾರಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ. ಆದರೂ ಬೇಡಿಕೆ ಈಡೇರದ ಕಾರಣ ಸರ್ಕಾರದ ಗಮನ ಸೆಳೆಯಲು ನಾಳೆ ಪ್ರತಿಭಟನೆ ನಡೆಸಲು ಆಶಾ ಕಾರ್ಯಕರ್ತೆಯರು ಮುಂದಾಗಿದ್ದಾರೆ.