ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ರಾಜಧಾನಿ ಬೆಂಗಳೂರು ಕ್ಷಣ ಕ್ಷಣಕ್ಕೂ ಭಯಂಕರ ಸ್ಥಿತಿಯತ್ತ ತಲುಪುತ್ತಿದೆ. ಬೆಡ್, ವೆಂಟಿಲೇಟರ್ ಗಾಗಿ ಆಸ್ಪತ್ರೆಗಳಿಗೆ ಅಲೆದಾಡಿ ಬೇಸತ್ತ ಸೋಂಕಿತ ಮಹಿಳೆಯೊಬ್ಬರು ಆಂಬುಲೆನ್ಸ್ ನಲ್ಲಿ ವಿಧಾನಸೌಧಕ್ಕೆ ಆಗಮಿಸಿರುವ ಘಟನೆ ನಡೆದಿದೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಿಗೂ ಅಲೆದಾಡಿದ್ದು, ಯಾವುದೇ ಆಸ್ಪತ್ರೆಗಳಲ್ಲಿಯೂ ಬೆಡ್ ವ್ಯವಸ್ಥೆ ಸಿಗದ ಸೋಂಕಿತ ಮಹಿಳೆಯ ಕುಟುಂಬ ಬೇರೆ ದಾರಿಯಿಲ್ಲದೇ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಆಂಬುಲೆನ್ಸ್ ನಲ್ಲಿ ಸೋಂಕಿತೆಯನ್ನು ಕರೆದುಕೊಂಡು ವಿಧಾನಸೌಧಕ್ಕೆ ಬಂದಿದ್ದು, ಬೆಡ್ ವ್ಯವಸ್ಥೆ ಮಾಡಿಕೊಡುವಂತೆ ಕಣ್ಣೀರಿಟ್ಟಿದ್ದಾರೆ.
ಮಕ್ಕಳಿಗೆ ʼಕೊರೊನಾʼ ಬಂದ್ರೆ ಏನು ಮಾಡ್ಬೇಕು..? ಇಲ್ಲಿದೆ ಉಪಯುಕ್ತ ಮಾಹಿತಿ
ವಿಧಾನಸೌಧದ ಎದುರು ಕುಟುಂಬಸ್ಥರು ಕಣೀರಿಡುತ್ತಿದ್ದಂತೆ ಎಚ್ಚೆತ್ತ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಕರೆ ಮಾಡಿ ಬೆಡ್ ವ್ಯವಸ್ಥೆ ಮಾಡಿಸಿದ್ದಾರೆ. ಅಲ್ಲದೇ ಸೋಂಕಿತ ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿಸಿದ್ದಾರೆ.