ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟ ನಡೆಸುತ್ತಿದ್ದು, ಅದರಲ್ಲೂ ಕಳೆದ ಕೆಲದಿನಗಳಿಂದ ಪ್ರತಿನಿತ್ಯ ಸಾವಿರಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಇದರ ಮಧ್ಯೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ನೀಡಿರುವ ಸೂಚ್ಯಂಕ ಮುನ್ಸೂಚನೆ ಬೆಚ್ಚಿಬೀಳಿಸುವಂತಿದೆ.
ಅಕ್ಟೋಬರ್ – ನವೆಂಬರ್ ವೇಳೆಗೆ ಕೊರೊನಾ ಪೀಡಿತರ ಸಂಖ್ಯೆ ತಾರಕಕ್ಕೆ ಏರಬಹುದು ಎನ್ನಲಾಗಿದ್ದು, ಈ ವಿಷಯವನ್ನು ಸ್ವತಃ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಜೊತೆಗೆ ಮಳೆ, ಚಳಿ ಮತ್ತು ಶೀತ ವಾತಾವರಣದಿಂದಾಗಿ ವೈರಸ್ ಗಳು ಬೇಗನೆ ನಾಶವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಂಡಿದೆ. ಅಧಿಕಾರಿಗಳು ಸಹ ಹಗಲಿರುಳು ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದು, ಸಾರ್ವಜನಿಕರು ಸಹ ಸಹಕಾರ ನೀಡಬೇಕಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ತಿಳಿಸಿದ್ದಾರೆ.