ವಿಧಾನರಿಷತ್ ಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ಜೆಡಿಯು ಪಕ್ಷದಿಂದ ಚಂದ್ರಶೇಖರ್ ವಿ. ಸ್ಥಾವರ ಮಠ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಯು ರಾಜ್ಯಾಧ್ಯಕ್ಷರಾದ ಮಹಿಮಾ ಜೆ.ಪಟೇಲ್ ಅವರು ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಮಟ್ಟದಿಂದ ನಮ್ಮ ಹೋರಾಟ ನಡೆದಿದೆ. ಗ್ರಾಮ ಸ್ವರಾಜ್ಯ ನಮ್ಮ ಕಲ್ಪನೆ. ಗ್ರಾಮಗಳ ಉದ್ಧಾರವೇ ನಮ್ಮ ಪಕ್ಷ ಧ್ಯೇಯವಾಗಿದೆ ಎಂದಿದ್ದಾರೆ. ಶಿಕ್ಷಕರ ಪರ ಹಿಂದಿನಿಂದಲೂ ಜೆಡಿಯು ಹೋರಾಟ ಮಾಡುತ್ತಿದೆ. ಪರಿಷತ್ ನಲ್ಲಿ ನಮ್ಮ ಹೋರಾಟ ಮುಂದುವರೆಯಲಿದ್ದು, ಈ ಉದ್ದೇಶದಿಂದ ಚಂದ್ರಶೇಖರ್ ವಿ. ಸ್ಥಾವರ ಮಠ ಅವರನ್ನು ನಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ನೇಮಕ ಮಾಡಲಾಗಿದೆ ಎಂದರು.
ಕೋವಿಡ್ ಮಹಾಮಾರಿ ಕಾರಣಕ್ಕೆ ಪರಿಷತ್ ಚುನಾವಣೆ ಮುಂದೂಡುವ ಸಾಧ್ಯತೆ ಇದೆ. ಆದರೆ ನಾವು ಪಕ್ಷದ ವತಿಯಿಂದ ಚಂದ್ರಶೇಖರ್ ವಿ. ಸ್ಥಾವರ ಮಠ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕ ಮಾಡುವ ಕೆಲಸ ನಡೆಸಿದ್ದೇವೆ, ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ ಗೆ ನಡೆಯುವ ಚುನಾವಣೆಗೆ ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆದಿದೆ ಎಂದಿದ್ದಾರೆ.
ಚಂದ್ರಶೇಖರ್ ವಿ. ಸ್ಥಾವರ ಮಠ, ಸ್ವತಃ ಶಿಕ್ಷಕರಾಗಿರುವ ಕಾರಣ ಶಿಕ್ಷಕರ ಪರ ಹೋರಾಟ ನಡೆಸಲಿದ್ದಾರೆ. ಸಾಮಾಜಿಕ ಕಳಕಳಿ ಇರುವ ಚಂದ್ರಶೇಖರ್ ವಿ. ಸ್ಥಾವರ ಮಠ, ಅವರ ಹಕ್ಕುಗಳಿಗಾಗಿ ಹೋರಾಟ ಮಾಡಲಿದ್ದಾರೆ ಎಂದರು.
ಪಕ್ಷ ಸಂಘಟನೆ ಎಂದರೆ ಪ್ರತಿಭಟನೆ, ಹೋರಾಟ ಮಾತ್ರ ಅಲ್ಲ. ಅದಕ್ಕೆ ಒಂದು ಮೂಲ ಉದ್ದೇಶ ಇರಬೇಕು. ಗ್ರಾಮ ಸ್ವರಾಜ್ಯದ ಕಲ್ಪನೆಯೊಂದಿಗೆ ಜೆಡಿಯು ಸಂಘಟನೆಯನ್ನು ಗ್ರಾಮೀಣ ಮಟ್ಟದಲ್ಲಿ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಿಗೆ ನೇರವಾಗಿ ಪಕ್ಷ ಸಂಘಟನೆಗೆ ಹೋಗುತ್ತಿದ್ದೇವೆ ಎಂದು ಮಹಿಮಾ ಪಟೆಲ್ ವಿವರ ನೀಡಿದರು.
ಬಳಿಕ ಜೆಡಿಯು ಅಭ್ಯರ್ಥಿ ಚಂದ್ರಶೇಖರ್ ವಿ. ಸ್ಥಾವರ ಮಠ ಮಾತನಾಡಿ, ಹಿಂದೆ ನಾವು ಶಿಕ್ಷಕರನ್ನು ಸೃಷ್ಟಿಕರ್ತ ಬ್ರಹ್ಮನಿಗೆ ಹೋಲಿಸುತ್ತಿದ್ದೆವು. ಉತ್ತಮ ರಾಷ್ಟ್ರವನ್ನು, ಸಮಾಜವನ್ನು ಕಟ್ಟುವಂತಹ ಶಕ್ತಿ ಹೊಂದಿದ್ದ ಶಿಕ್ಷಕರನ್ನು 70ರ ದಶಕದ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಶಿಕ್ಷಕರನ್ನು ಕಡೆಗಣನೆ ಮಾಡುತ್ತಾ ಬಂದಿವೆ ಎಂದರು.