ಮನುಕುಲಕ್ಕೆ ಮಾರಕವಾಗಿರುವ ಕೊರೊನಾ ಮಹಾಮಾರಿ ದಿನೇ ದಿನೇ ತನ್ನ ಆರ್ಭಟ ಹೆಚ್ಚಿಸಿಕೊಳ್ಳುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆ ಕೊರೊನಾ ಆರ್ಭಟಕ್ಕೆ ತತ್ತರಿಸಿಹೋಗಿದ್ದು, ಹೀಗಾಗಿ ಬಹುತೇಕರು ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ.
ಇದರ ಮಧ್ಯೆ ಮಂಡ್ಯ ತಾಲೂಕಿನ ಬೇಲೂರು ಗ್ರಾಮದ ಜನತೆ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಬೆಂಗಳೂರಿನಿಂದ ತಮ್ಮ ಊರಿಗೆ ಬರುವವರಿಗೆ 5000 ರೂಪಾಯಿ ದಂಡ ವಿಧಿಸಲು ತೀರ್ಮಾನಿಸಿದ್ದಾರೆ.
ಬೆಂಗಳೂರಿನಿಂದ ಬರುವವರು ತಮ್ಮ ಜೊತೆಗೆ ಕೊರೊನಾ ಸೋಂಕು ತಂದರೆ ಗತಿಯೇನು ಎಂಬ ಭೀತಿಯೇ ಇದಕ್ಕೆ ಕಾರಣವಾಗಿದ್ದು, ಹೀಗಾಗಿ ಗ್ರಾಮದಲ್ಲಿ ಡಂಗೂರ ಸಾರಲಾಗಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.