ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜೊತೆಗೆ ಮರಣ ಮೃದಂಗ ಮುಂದುವರೆದಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್ ವ್ಯವಸ್ಥೆ, ಸರಿಯಾದ ಚಿಕಿತ್ಸೆ ಇಲ್ಲದೇ ಸೋಂಕಿತರು ಸಾವನ್ನಪ್ಪುತ್ತಿದ್ದರೆ ಇತ್ತ ಶವ ಸಂಸ್ಕಾರಕ್ಕೂ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಸಿಬ್ಬಂದಿಗಳೇ ಸೋಂಕಿತ ಶವಗಳ ಅಂತ್ಯಸಂಸ್ಕಾರವನ್ನು ನೆರವೇರಿಸಬೇಕಾದ ಪರಿಸ್ಥಿತಿ ಬಂದೊದಗಿದ್ದು, ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಭಯದ ವಾತಾವಾರಣ ನಿರ್ಮಾಣವಾಗುತ್ತಿದೆ.
ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನದಲ್ಲಿ 19,637 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 143 ಜನರು ಕೋವಿಡ್ ಗೆ ಬಲಿಯಾಗಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದ ಸೋಂಕಿತರನ್ನು ಇದೀಗ ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಬೆಂಗಳೂರು ಹೊರವಲಯದ ತಾವರೆಕೆರೆ ಬಳಿಯ ಖಾಲಿ ಜಾಗದಲ್ಲಿ 26 ಕೋವಿಡ್ ಶವಗಳ ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿಸಲಾಗಿದ್ದು, ಇನ್ನು 26 ಶವಗಳು ಆಂಬುಲೆನ್ಸ್ ನಲ್ಲಿದ್ದು, ಅವುಗಳ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ.
ಮನೆ ಹುಡುಕುವಾಗ ಎಡವಟ್ಟು ಮಾಡಿ ಬೆಪ್ಪಾದ ಯುವತಿ…!
ಕೋವಿಡ್ ನಿಂದ ಸಾವನ್ನಪ್ಪುತ್ತಿರುವವರ ಅಂತಿಮ ದರ್ಶನಕ್ಕೂ ಕುಟುಂಬಸ್ಥರು, ಸಂಬಂಧಿಕರು ಬಾರದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರುದ್ರಭೂಮಿಯತ್ತಲೂ ಕುಟುಂಬ ಸದಸ್ಯರು ಬರುತ್ತಿಲ್ಲ. ಸಿಬ್ಬಂದಿಗಳೇ ಆಂಬುಲೆನ್ಸ್ ಗಳಲ್ಲಿ ಮೃತದೇಹಗಳನ್ನು ತಂದು ಸಾಮೂಹಿಕವಾಗಿ ಅಂತ್ಯಸಂಸ್ಕಾರವನ್ನು ನೆರವೇರಿಸುತ್ತಿರುವ ದೃಶ್ಯಗಳು ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಕೊರೊನಾ ಮಹಾಮಾರಿಯಿಂದಾಗಿ ಎಲ್ಲರೂ ಇದ್ದರೂ ಯಾರೂ ಇಲ್ಲದವರಂತೆ ಅನಾಥವಾಗಿ, ಬೀದಿ ಹೆಣವಾಗಿ ಅಂತಿಮ ಯಾತ್ರೆ ಮುಗಿಸಬೇಕಾದ ಭಯಾನಕ ಸಂದರ್ಭ ಎದುರಾಗಿರುವುದು ಕೋವಿಡ್ ಭೀಕರತೆಗೆ ಸಾಕ್ಷಿಯಾಗಿದೆ ಎಂಬುದು ಕುಟುಂಬಸ್ಥರ ಕಣ್ಣೀರು.