ಬೀದರ್ ಕೋಟೆ, ಕರ್ನಾಟಕದ ದಕ್ಷಿಣ ಪ್ರಸ್ಥಭೂಮಿ ಎಂದೇ ಹೆಸರಾದ ಬೀದರ್ ನಗರದಲ್ಲಿದೆ. ಬಹುಮನಿ ಮನೆತನದ ಸುಲ್ತಾನ್ ಅಲ್-ಉದ್-ದಿನ್ ಬಹಮನ್ ಗುಲ್ಬರ್ಗಾದಿಂದ ಬೀದರ್ಗೆ ತನ್ನ ರಾಜಧಾನಿಯನ್ನು 1427ರಲ್ಲಿ ವರ್ಗಾಯಿಸಿಕೊಂಡ ಮತ್ತು ಈ ಕೋಟೆಯನ್ನೂ ಇತರೆ ಇಸ್ಲಾಮಿಕ್ ಸ್ಮಾರಕಗಳನ್ನೂ ಕಟ್ಟಿಸಿದ. ಬೀದರ್ ಕೋಟೆಯ ಒಳಗೆ 30ಕ್ಕೂ ಹೆಚ್ಚು ಸ್ಮಾರಕಗಳಿವೆ.
ಕೋಟೆ, ನಗರ ಮತ್ತು ಜಿಲ್ಲೆ ಒಂದೇ ಹೆಸರಿನಿಂದ ಕರೆಯಲ್ಪಡುವುದು ಇಲ್ಲಿನ ವಿಶೇಷ. ಕೋಟೆ ಆಯತಾಕಾರದ ಪ್ರಸ್ಥಭೂಮಿಯ ಅಂಚಿನಲ್ಲಿದ್ದು, 35 ಕಿ.ಮಿ.ಉದ್ದ ಮತ್ತು 12 ಕಿ.ಮಿ. ಅಗಲದಷ್ಟು ವಿಶಾಲವಾಗಿದೆ.
ಬೀದರ್ ನಗರ ಮತ್ತು ಜಿಲ್ಲೆಯನ್ನು ಆವರಿಸಿಕೊಂಡಿರುವ ಸುತ್ತಮುತ್ತಲಿನ ಭೂಪ್ರದೇಶ ಕಾರಂಜ ನದಿ, ಗೋದಾವರಿ ನದಿಯ ಮುಖ್ಯ ಉಪನದಿಯಾದ ಮಂಜಿರದ ಕಾಲುವೆಗಳಿಂದ ಸುತ್ತುವರಿಯಲ್ಪಟ್ಟಿದೆ. ಚಾಲುಕ್ಯರ ಪ್ರಾಚೀನ ರಾಜಧಾನಿ ಬಸವಕಲ್ಯಾಣದಿಂದ ಬೀದರ್ ನ ದಕ್ಷಿಣಕ್ಕೆ 64 ಕಿ.ಮಿ. ದೂರದಲ್ಲಿದೆ.