ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್, ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಸಿರಾಟದ ತೊಂದರೆ, ಬೆನ್ನು ನೋವು ಹಾಗೂ ತೀವ್ರ ಜ್ವರದಿಂದ ಬಳಲುತ್ತಿರುವ ಶಶಿಕಲಾ ಅವರನ್ನು ಜೈಲಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಾರದ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಜನವರಿ 27ರಂದು ಬಿಡುಗಡೆಯಾಗಲಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಶಶಿಕಲಾ ಬಿಡುಗಡೆಯಾಗುತ್ತಿರುವುದು ಮಹತ್ವ ಪಡೆದುಕೊಂಡಿದೆ.