
ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲಾಗಿತ್ತು. ಬಿಜೆಪಿ ಅತ್ಯಧಿಕ ಸ್ಥಾನ ಗಳಿಸಿದ್ದರೂ ಸಹ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದು, ಸರ್ಕಾರ ರಚನೆಗೆ ನಿರಂತರ ಪ್ರಯತ್ನ ನಡೆಸುತ್ತಿತ್ತು.
ಆ ಬಳಿಕ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹಲವು ಶಾಸಕರುಗಳು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಅತ್ಯಧಿಕ ಸ್ಥಾನ ಪಡೆದಿದ್ದ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ರಾಜೀನಾಮೆ ನೀಡಿದ್ದ ಶಾಸಕರುಗಳಿಗೆ ಉಪ ಚುನಾವಣೆ ಟಿಕೆಟ್ ಸೇರಿದಂತೆ ಸಚಿವ ಸ್ಥಾನ ಭರವಸೆ ನೀಡಿದ್ದರೆನ್ನಲಾಗಿದೆ.
ಅದರಂತೆ ಉಪ ಚುನಾವಣೆಯಲ್ಲಿ ಪಕ್ಷೇತರ ಶಾಸಕ ಆರ್. ಶಂಕರ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಬಿಜೆಪಿ ಟಿಕೆಟ್ ನೀಡಲಾಗಿದ್ದು, ಈ ಉಪ ಚುನಾವಣೆಯಲ್ಲಿ ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಪರಾಭವಗೊಂಡಿದ್ದರು. ಆ ಬಳಿಕವೂ ಅವರುಗಳಿಗೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆಯನ್ನು ಯಡಿಯೂರಪ್ಪನವರು ನೀಡಿದ್ದು, ಇದೀಗ ಆರ್. ಶಂಕರ್, ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರಿಗೆ ವಿಧಾನಪರಿಷತ್ ಸ್ಥಾನ ನೀಡುವುದು ಖಚಿತವೆನ್ನಲಾಗಿದೆ. ಆದರೆ ಈ ಮೂವರೂ ಕುರುಬ ಸಮಾಜಕ್ಕೆ ಸೇರಿರುವ ಕಾರಣ ಒಂದೇ ಸಮುದಾಯಕ್ಕೆ ಪ್ರಾಶಸ್ತ್ಯ ನೀಡುವ ಕುರಿತಂತೆ ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.