ಬೆಂಗಳೂರು: ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಈ ನಡುವೆ ಬಹ್ರೈನ್ ನಿಂದ ರಾಜ್ಯಕ್ಕೆ 40 ಮೆಟ್ರಿಕ್ ಟನ್ ಆಕ್ಸಿಜನ್ ಆಗಮನವಾಗಿದೆ. ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ ಬಳಸುವುದನ್ನು ಬಿಟ್ಟು ಬಿಜೆಪಿ ನಾಯಕರು ವಿದೇಶದಿಂದ ಬಂದ ಆಕ್ಸಿಜನ್ ಪಡೆದು ಸಂಭ್ರಮಿಸುತ್ತಿರುವ ಬಗ್ಗೆ ಮಾಜಿ ಸಚಿವ ಯು.ಟಿ. ಖಾದರ್ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಯು.ಟಿ. ಖಾದರ್, ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಬಳಸಲು ನಮಗೆ ಅವಕಾಶವಿಲ್ಲ. ದೂರದ ಬಹ್ರೈನ್ ನಿಂದ ಬಂದ ಆಕ್ಸಿಜನ್ ಹಡಗೇರಿ ಖುಷಿಪಡುವ ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯಬೇಕೋ ದೀಪ ಹಚ್ಚಬೇಕೋ ತಿಳಿಯುತ್ತಿಲ್ಲ. ಧಿಕ್ಕಾರವಿದೆ ನಿಮ್ಮ ಅಸಮರ್ಥತೆಗೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಹ್ರೈನ್ ನಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತ ಐಎನ್ಎಸ್ ತಲ್ವಾರ್ ಹೆಸರಿನ ಹಡಗು ನಿನ್ನೆ ನವಮಂಗಳೂರು ಬಂದರಿಗೆ ಬಂದು ತಲುಪಿತ್ತು.