ರಾಜ್ಯಸಭಾ ಚುನಾವಣೆ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಪೈಪೋಟಿ ನಡೆಯುತ್ತಿರುವ ಮಧ್ಯೆ ಶನಿವಾರದಂದು ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಆಕಾಂಕ್ಷಿಗಳ ಜೊತೆಗೆ ಅಚ್ಚರಿಯ ಅಭ್ಯರ್ಥಿಯ ಹೆಸರನ್ನು ಹೈಕಮಾಂಡ್ ಗೆ ಶಿಫಾರಸ್ಸು ಮಾಡಲಾಗಿದೆ.
ರಾಜ್ಯಸಭೆಯ ಎರಡು ಸ್ಥಾನಗಳನ್ನು ಬಿಜೆಪಿ ಸುಲಭವಾಗಿ ಗೆಲ್ಲಬಹುದಾಗಿದ್ದು, ಹೀಗಾಗಿ ಮೊದಲ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದ ರಮೇಶ್ ಕತ್ತಿ ಹಾಗೂ ಪ್ರಭಾಕರ್ ಕೋರೆ ಅವರ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿದ್ದು ಮತ್ತೊಂದು ಸ್ಥಾನಕ್ಕೆ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಇದು ಸ್ವತಃ ಬಿಜೆಪಿಯ ಹಲವು ನಾಯಕರಿಗೆ ಅಚ್ಚರಿ ತಂದಿದೆ.
ಪ್ರಕಾಶ್ ಶೆಟ್ಟಿ ಎಲ್ಲ ಪಕ್ಷಗಳ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದರೂ ಸಹ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ಅಲ್ಲದೆ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆಂಬ ಕಾರಣಕ್ಕೆ ಅವರ ಹೆಸರನ್ನು ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ. ಎರಡು ಸ್ಥಾನಗಳಿಗೆ ಈ ಮೂವರ ಪೈಕಿ ಯಾರ್ಯಾರ ಹೆಸರುಗಳಿಗೆ ಬಿಜೆಪಿ ಹೈಕಮಾಂಡ್ ಅಂತಿಮ ಮುದ್ರೆ ಒತ್ತಲಿದೆ ಎಂಬುದನ್ನು ಕಾದುನೋಡಬೇಕಿದೆ.