alex Certify ಬಿಜೆಪಿಯಿಂದ ‘ಅಚ್ಚರಿ’ಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವವರ ಆಸ್ತಿ ಎಷ್ಟಿದೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿಯಿಂದ ‘ಅಚ್ಚರಿ’ಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವವರ ಆಸ್ತಿ ಎಷ್ಟಿದೆ ಗೊತ್ತಾ…?

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಸುಲಭವಾಗಿ ಎರಡು ಸ್ಥಾನಗಳನ್ನು ಗೆಲ್ಲಬಹುದಾಗಿದ್ದ ಬಿಜೆಪಿ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ್ ಗಸ್ತಿ ಅವರನ್ನು ಬಿಜೆಪಿ ಹೈಕಮಾಂಡ್, ರಾಜ್ಯಸಭಾ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದ್ದು, ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿರುವುದಕ್ಕೆ ಪಕ್ಷದ ವಲಯದಲ್ಲಿ ಹರ್ಷ ಮೂಡಿಸಿದೆ.

ಈ ಇಬ್ಬರು ಮಂಗಳವಾರದಂದು ತಮ್ಮ ನಾಮಪತ್ರ ಸಲ್ಲಿಸಿದ್ದು, ಇದರ ಜೊತೆಗೆ ಆಸ್ತಿ ವಿವರದ ಮಾಹಿತಿ ನೀಡಿದ್ದಾರೆ. ಈರಣ್ಣ ಕಡಾಡಿ ಕೋಟ್ಯಾಧಿಪತಿಯಾಗಿದ್ದರೆ ಅಶೋಕ್ ಗಸ್ತಿ ಲಕ್ಷಾಧೀಶ್ವರರಾಗಿದ್ದಾರೆ.

ಈರಣ್ಣ ಕಡಾಡಿ 1 ಕೋಟಿ ರೂ. ಚರಾಸ್ತಿ, 1.33 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಬಳಿ ನಗದು 2 ಲಕ್ಷ ರೂಪಾಯಿಗಳಿದ್ದರೆ ಉಳಿತಾಯ ಖಾತೆಯಲ್ಲಿ 21.86 ಲಕ್ಷ ರೂ. ಹಾಗೂ ಠೇವಣಿಯಾಗಿ 14.13 ಲಕ್ಷ ರೂಪಾಯಿ ಇಟ್ಟಿದ್ದಾರೆ.

16 ಲಕ್ಷ ರೂ. ಮೌಲ್ಯದ ಇನ್ನೋವಾ ಕಾರು ಹೊಂದಿದ್ದು, ಒಂದು ಪೆಟ್ರೋಲ್ ಬಂಕ್ ಸಹ ಇದೆ. 60 ಗ್ರಾಂ ಚಿನ್ನಾಭರಣ, 5.18 ಎಕರೆ ಜಮೀನು, 8 ನಿವೇಶನ, ಬೆಳಗಾವಿಯಲ್ಲಿ ಒಂದು ಮನೆ ಇದ್ದು, ಜೊತೆಗೆ 1.90 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಾರೆ. ಇನ್ನು ಪತ್ನಿ ಹಾಗೂ ಪುತ್ರರು ಸಹ ಆಸ್ತಿ ಹೊಂದಿದ್ದಾರೆ.

ಅಶೋಕ್ ಗಸ್ತಿ 1 ಲಕ್ಷ ರೂಪಾಯಿ ನಗದು ಹೊಂದಿದ್ದು, ಉಳಿತಾಯ ಖಾತೆಯಲ್ಲಿ 6,273 ರೂಪಾಯಿ ಇದೆ. ಇವರ ಬಳಿ 25 ಸಾವಿರ ರೂ. ಮೌಲ್ಯದ ದ್ವಿಚಕ್ರವಾಹನ ಮಾತ್ರ ಇದೆ. ಅಲ್ಲದೆ 1.5 ಲಕ್ಷ ರೂ. ಮೌಲ್ಯದ ಎಲ್ಐಸಿ ಪಾಲಿಸಿ ಹೊಂದಿದ್ದಾರೆ.

ಅಶೋಕ್ ಗಸ್ತಿ ಸಾಲವನ್ನೂ ಪಡೆದಿಲ್ಲ. ಸ್ಥಿರಾಸ್ತಿಯೂ ಇವರಿಗಿಲ್ಲ. ಇವರ ಪತ್ನಿ ಸುಮಾ 8 ಲಕ್ಷ ರೂ. ಮೌಲ್ಯದ ನಿವೇಶನ ಹೊಂದಿದ್ದು, ನಗದು 50ಸಾವಿರ ರೂ. ಹಾಗೂ ಉಳಿತಾಯ ಖಾತೆಯಲ್ಲಿ 8006 ರೂಪಾಯಿ ಹೊಂದಿದ್ದಾರೆ. ಜೊತೆಗೆ 50 ಗ್ರಾಂ ಚಿನ್ನಾಭರಣ ಇದ್ದು, ಒಂದು ಲಕ್ಷ ರೂ. ಮೌಲ್ಯದ ಎಲ್ಐಸಿ ಪಾಲಿಸಿ ಹೊಂದಿದ್ದಾರೆ. ಅಶೋಕ್ ಗಸ್ತಿ ಅವರ ಪುತ್ರಿ ನೇಹಾ ಅವರ ಬಳಿ 40 ಗ್ರಾಂ ಚಿನ್ನಾಭರಣವಿದ್ದರೆ ಮತ್ತೊಬ್ಬ ಪುತ್ರಿ ನಿತ್ಯಾ ಬಳಿ 20 ಗ್ರಾಂ ಚಿನ್ನ ಹಾಗೂ 1 ಲಕ್ಷ ರೂ. ಮೌಲ್ಯದ ಎಲ್ಐಸಿ ಬಾಂಡ್ ಹೊಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...