ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣ ಸಂಬಂಧ ಸಿಸಿಬಿ ವಿಚಾರಣೆಗೆ ಹಾಜರಾಗಿರುವ ಸ್ಟಾರ್ ದಂಪತಿಗಳಾದ ನಟ ದಿಂಗತ್ ಹಾಗೂ ಐಂದ್ರಿತಾ ರೇ ನಾವು ಪಾರ್ಟಿಗಳಿಗೆ ಹೋಗುತ್ತಿದ್ದುದು ನಿಜ ಎಂದು ಹೇಳಿದ್ದಾರೆನ್ನಲಾಗಿದೆ.
ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿರುವ ನಟ ದಿಂಗತ್ ಹಾಗೂ ಐಂದ್ರಿತಾ ರೇ ಅವರನ್ನು ಈಗಾಗಲೇ ಸಿಸಿಬಿ ಅಧಿಕಾರಿಗಳು ಒಂದು ಸುತ್ತಿನ ವಿಚಾರಣೆ ಮುಗಿಸಿದ್ದಾರೆ. ನಟ ದಿಗಂತ್ ಅವರನ್ನು ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ವಿಚಾರಣೆ ನಡೆಸಿದರೆ, ನಟಿ ಐಂದ್ರಿತಾರನ್ನು ಅಂಜುಮಾಲಾ ನಾಯಕ್ ಅವರು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಇಬ್ಬರ ಮೊಬೈಲ್ ನ್ನು ವಶಕ್ಕೆ ಪಡೆದು ಸುಮಾರು 20 ನಿಮಿಷಗಳ ಕಾಲ ಪರಿಶೀಲನೆ ನಡೆಸಿದ್ದಾರೆ. ಪಾರ್ಟಿ ಆಯೋಜನೆ, ಪಾರ್ಟಿಯಲ್ಲಿ ಭಾಗಿ, ಫಾಜಿಲ್, ಶಿವಪ್ರಕಾಶ್ ಕುರಿತ ಪರಿಚಯ ಸೇರಿ ಹಲವು ವಿಷಯಗಳ ಬಗ್ಗೆ ಸಿಸಿಬಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಈ ವೇಳೆ ನಟ ದಿಗಂತ್ ಪಾರ್ಟಿ ಬಗ್ಗೆ ಗೊತ್ತು, ಆದರೆ ಡ್ರಗ್ಸ್ ಬಗ್ಗೆ ನಮಗೆ ಗೊತ್ತಿಲ್ಲ ಎಂದಿದ್ದಾರೆ. ನಾವು ಪಾರ್ಟಿಗಳಿಗೆ ಹೋಗುತ್ತಿದ್ದುದು ನಿಜ. ಆದರೆ ಪಾರ್ಟಿಗಳಲ್ಲಿ ಡ್ರಗ್ಸ್ ಸಪ್ಲೈ ಹಾಗೂ ಸೇವನೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ ಎಂದು ಹೇಳಲಾಗಿದೆ.