ಕೊರೊನಾ ಕಾರಣಕ್ಕೆ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ಶಾಲಾ – ಕಾಲೇಜುಗಳು ಹಂತಹಂತವಾಗಿ ಆರಂಭವಾಗುತ್ತಿವೆ. ಈಗಾಗಲೇ 10 ಹಾಗೂ 12 ನೇ ತರಗತಿ ಜೊತೆಗೆ ವಿದ್ಯಾಗಮ ಯೋಜನೆ ಸಹ ಆರಂಭಗೊಂಡಿದೆ.
ಇದೀಗ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಟಡಿದ್ದು, ಸಂಕ್ರಾಂತಿ ನಂತರ ಮೊದಲ, ದ್ವಿತೀಯ ವರ್ಷದ ಪದವಿ, ಸ್ನಾತಕೋತ್ತರ, ಡಿಪ್ಲೊಮೋ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಫ್ ಲೈನ್ ತರಗತಿ ನಡೆಸಲು ತೀರ್ಮಾನಿಸಲಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಸರಕಾರಿ – ಖಾಸಗಿ ವಲಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು, ಉನ್ನತ ಶಿಕ್ಷಣ ಸೇರಿ ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ಮಾಹಿತಿ ನೀಡಿದ್ದಾರೆ.
ಈಗಾಗಲೇ ಪದವಿ, ಸ್ನಾತಕೋತ್ತರ, ಡಿಪ್ಲೊಮೋ ಮತ್ತು ಎಂಜಿನಿಯರಿಂಗ್ ತರಗತಿಗಳ ಅಂತಿಮ ವರ್ಷದ/ಸೆಮಿಸ್ಟರ್ ನ ಆಫ್‌ಲೈನ್ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿರುವ ಬೆನ್ನಲ್ಲೇ ಈ ತೀರ್ಮಾನ ಹೊರ ಬಿದ್ದಿದೆ. ಜೊತೆಗೆ ಪರೀಕ್ಷೆ ಹಾಗೂ ಶೈಕ್ಷಣಿಕ ವರ್ಷದ ಆರಂಭದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಮೇ ತಿಂಗಳ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಉನ್ನತ ಶಿಕ್ಷಣದ ಶೈಕ್ಷಣಿಕ ವೇಳಾಪಟ್ಟಿಯನ್ನು ರೂಪಿಸಲಾಗುವುದು ಎಂದು ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.