ರಾಜ್ಯಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಕಳುಹಿಸಿದ್ದ ಪಟ್ಟಿಯನ್ನು ತಿರಸ್ಕರಿಸಿರುವ ಹೈಕಮಾಂಡ್, ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಅಭ್ಯರ್ಥಿಗಳನ್ನಾಗಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರನ್ನು ತಬ್ಬಿಬ್ಬಾಗುವಂತೆ ಮಾಡಿದೆ. ಅಲ್ಲದೆ ಪರೋಕ್ಷವಾಗಿ ಪರ್ಯಾಯ ನಾಯಕತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಕುರಿತು ಸೂಚನೆಯನ್ನು ನೀಡಿದೆ.
ಇದು ಬಿಜೆಪಿ ವಲಯದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದ್ದು, ಸಾಮಾನ್ಯ ಕಾರ್ಯಕರ್ತರಿಗೂ ಹೈಕಮಾಂಡ್ ಮಣೆ ಹಾಕಲಿದೆ ಎಂದು ಒಂದು ವರ್ಗದವರು ಸಂಭ್ರಮ ಪಡುತ್ತಿದ್ದರೆ, ಮತ್ತೊಂದು ವರ್ಗ ಈ ಬೆಳವಣಿಗೆಯಿಂದ ತೀವ್ರ ಭ್ರಮನಿರಸನಕ್ಕೊಳಗಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ನಮ್ಮ ರಾಜಕೀಯ ಭವಿಷ್ಯವೇನು ಎಂಬ ಆತಂಕಕ್ಕೂ ಒಳಗಾಗಿದೆ.
ರಾಜ್ಯಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಮೂಲಕ ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆ ಕುರಿತಂತೆ ಪರೋಕ್ಷ ಸೂಚನೆ ನೀಡಿದೆ ಎನ್ನಲಾಗುತ್ತಿದ್ದು, ಈಗ ರಾಜ್ಯಸಭೆ ಅಭ್ಯರ್ಥಿಗಳಾಗಿರುವ ಇಬ್ಬರೂ ಸಹ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಆಯ್ಕೆ ಎನ್ನಲಾಗುತ್ತಿದೆ. ಹೀಗಾಗಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಹ್ಲಾದ್ ಜೋಶಿ ಅವರನ್ನು ನೇಮಕ ಮಾಡುವ ಕುರಿತಂತೆ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆಯಾ ಎಂಬ ಅನುಮಾನ ಮೂಡಿದೆ.