ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿರುವ ಸಂದರ್ಭದಲ್ಲಿ ಯಡಿಯೂರಪ್ಪನವರು ಅನುಸರಿಸಿದ ಚಾಣಾಕ್ಷ ನಡೆಯೊಂದು ಬಿಜೆಪಿ ಹೈಕಮಾಂಡ್ ಗೆ ಶಾಕ್ ನೀಡಿದೆ ಎನ್ನಲಾಗಿದೆ. ತಮ್ಮ ಈ ನಡೆಯ ಮೂಲಕ ಯಡಿಯೂರಪ್ಪ ಹೈಕಮಾಂಡ್ ನಾಯಕರಿಗೆ ಪರೋಕ್ಷ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಹೈಕಮಾಂಡ್ ನಾಯಕರು ವಿಳಂಬ ಧೋರಣೆ ಅನುಸರಿಸಿದ್ದ ಕಾರಣ ಅಸಮಾಧಾನಗೊಂಡಿದ್ದ ಯಡಿಯೂರಪ್ಪ, ಯಾರೊಂದಿಗೂ ಚರ್ಚೆ ನಡೆಸದೆ ವೀರಶೈವ – ಲಿಂಗಾಯತ ಸಮುದಾಯವನ್ನು ಓಬಿಸಿ ವರ್ಗಕ್ಕೆ ಸೇರಿಸುವ ಪ್ರಸ್ತಾವವನ್ನು ಮುಂದೆ ಮಾಡಿದ್ದರು. ಯಡಿಯೂರಪ್ಪನವರು ಏಕಾಏಕಿ ಕೈಗೊಂಡ ಈ ನಿರ್ಧಾರ ಅಚ್ಚರಿಗೀಡು ಮಾಡಿತ್ತು.
ಹೀಗಾಗಿಯೇ ಕೇಂದ್ರ ಗೃಹಸಚಿವ ಅಮಿತ್ ಶಾ, ಯಡಿಯೂರಪ್ಪನವರಿಗೆ ಕರೆ ಮಾಡಿ ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ತಮ್ಮ ಈ ನಡೆಯ ಮೂಲಕ ಯಡಿಯೂರಪ್ಪ ತಾವು ವೀರಶೈವ – ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎಂಬ ಸಂದೇಶವನ್ನು ಬಿಜೆಪಿ ಕೇಂದ್ರ ವರಿಷ್ಠರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಮುಂದಾದರೆ ಈ ಸಮುದಾಯದ ವಿರೋಧ ಎದುರಿಸಬೇಕಾಗುತ್ತದೆ ಎಂಬ ಪರೋಕ್ಷ ಸಂದೇಶವನ್ನೂ ರವಾನಿಸಿದ್ದಾರೆ.