ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ನಟಿಯರಾದ ಸಂಜನಾ ಹಾಗೂ ರಾಗಿಣಿ ಲಾಕ್ ಡೌನ್ ಸಮಯದಲ್ಲಿ ಸ್ವತಃ ಡ್ರಗ್ ಪೆಡ್ಲರ್ ಗಳಿಂದ ಡ್ರಗ್ಸ್ ತರಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ.
ಬಂಧಿತ ನಟಿಯರು ಹಾಗೂ ಮೂವರು ಅಂತರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ನಡುವಿನ ಕಾಲ್ ಡೀಟೇಲ್ಸ್ ಗಳ ರಹಸ್ಯ ಬಯಲಾಗಿದ್ದು, ಡ್ರಗ್ ಪೆಡ್ಲರ್ ಗಳ ಜೊತೆ ಸಂಜನಾ ಹಾಗೂ ರಾಗಿಣಿ ನಿರಂತರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ನಟಿ ಸಂಜನಾ ಡ್ರಗ್ ಪೆಡ್ಲರ್ ಗಳಿಗೆ ಒಟ್ಟು 285 ಬಾರಿ ಕರೆ ಮಾಡಿದ್ದಾರೆ. ಆರೋಪಿ ಲೂಮ್ ಪೆಪ್ಪರ್ ಗೆ 79 ಬಾರಿ, ಓಸ್ಸಿ ಪಿಲಿಪ್ ಗೆ 86 ಬಾರಿ ಕರೆ ಮಾಡಿರುವುದು ಸಿಸಿಬಿ ತನಿಖೆ ವೇಳೆ ಗೊತ್ತಾಗಿದೆ. ಇನ್ನು ರಾಗಿಣಿ ಕಾಲ್ ಡಿಟೇಲ್ಸ್ ನಲ್ಲಿ ಲೂಮ್ ಪೆಪ್ಪರ್ ಗೆ 109 ಬಾರಿ ಕರೆ ಹೋಗಿದ್ದರೆ, ಉಡೇನ್ ಗೆ 70, ಒಸ್ಸಿಗೆ 98 ಬಾರಿ ಕರೆ ಮಾಡಿ ಡ್ರಗ್ಸ್ ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ನಟಿ ಮಣಿಯರು ಹಾಗೂ ಉಳಿದ ಆರೋಪಿಗಳಾದ ವಿರೇನ್ ಖನ್ನಾ, ವೈಭವ್ ಜೈನ್ ಎಲ್ಲರೂ ಅಂತರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಡ್ರಗ್ಸ್ ಗೆ ಬೇಡಿಕೆ ಇಟ್ಟಿದ್ದಾರೆ ಮಾತ್ರವಲ್ಲ ಡ್ರಗ್ ಪಡೆದು ಮಾರಾಟ ಮಾಡಿರುವ ಮಾಹಿತಿ ಕೂಡ ಸಿಸಿಬಿ ಲಭ್ಯವಾಗಿದೆ ಎನ್ನಲಾಗಿದೆ.