ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ರಾಜ್ಯ ಸರ್ಕಾರ ಮಂಡಿಸಲು ಮುಂದಾಗುತ್ತಿದ್ದಂತೆಯೇ ರೈತರ ಆಕ್ರೋಶ ಭುಗಿಲೆದ್ದಿದೆ. ಕರ್ನಾಟಕ ಬಂದ್ ಮಾಡಬೇಕೋ ಬೇಡವೋ ಎಂಬ ಆಲೋಚನೆಯಲ್ಲಿದ್ದ ರೈತ ಮುಖಂಡರು ಈಗ ಸೋಮವಾರ ಕರ್ನಾಟಕ ಸಂಪೂರ್ಣ ಬಂದ್ ಮಾಡಲು ಕರೆ ನೀಡಿದ್ದಾರೆ.
ರೈತರು ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿದ್ದು, ಬಂದ್ ಮಾಡುವ ಬದಲು ಸರ್ಕಾರದ ತೀರ್ಮಾನವನ್ನು ನೋಡಿ ಬಳಿಕ ಮುಂದುವರೆಯಲು ನಿರ್ಧರಿಸಿದ್ದರು. ಕರ್ನಾಟಕ ಬಂದ್ ಕುರಿತು ರೈತ ನಾಯಕರು ಕೈಗೊಳ್ಳುವ ಯಾವುದೇ ತೀರ್ಮಾನವನ್ನು ತಾವುಗಳು ಬೆಂಬಲಿಸುವುದಾಗಿ ಕನ್ನಡ ಪರ ಹೋರಾಟಗಾರರು, ದಲಿತ ಮುಖಂಡರು, ಲಾರಿ ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಆಟೋ ಚಾಲಕರ ಸಂಘ ಸೇರಿದಂತೆ ಬಹುತೇಕ ಸಂಘಟನೆಗಳು ತಿಳಿಸಿದ್ದವು.
ಇದೀಗ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಲು ಮುಂದಾಗುತ್ತಿದ್ದಂತೆಯೇ ಆಕ್ರೋಶ ಮುಗಿಲು ಮುಟ್ಟಿದೆ. ಫ್ರೀಡಂ ಪಾರ್ಕ್, ಮೌರ್ಯ ಸರ್ಕಲ್ ಮೊದಲಾದ ಕಡೆ ಜಮಾಯಿಸಿರುವ ರೈತರು, ಸರ್ಕಾರದ ವಿರುದ್ದ ತಮ್ಮ ಕಿಚ್ಚು ಹೊರ ಹಾಕುತ್ತಿದ್ದಾರೆ. ನಾಳೆಯಿಂದಲೇ ಹಳ್ಳಿ ಹಳ್ಳಿಗಳಲ್ಲೂ ಪ್ರತಿಭಟನೆ ಆರಂಭವಾಗಲಿದೆ ಎಂದು ರೈತ ನಾಯಕರು ತಿಳಿಸಿದ್ದಾರೆ.