ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ದೇಶದಲ್ಲಿ ಕಳೆದ ಎರಡೂವರೆ ತಿಂಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಈಗ ಐದನೇ ಹಂತದ ಲಾಕ್ ಡೌನ್ ನಲ್ಲಿ ಬಹಳಷ್ಟು ಸಡಿಲಿಕೆಗಳನ್ನು ನೀಡಲಾಗಿದೆ.
ಹೀಗಾಗಿ ಚಿತ್ರಮಂದಿರ, ಜಿಮ್, ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಸೀಮಿತ ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದಂತೆ ರಾಜ್ಯದಲ್ಲಿ ಎಲ್ಲ ಚಟುವಟಿಕೆಗಳೂ ಆರಂಭವಾಗಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮಾಲ್, ಧಾರ್ಮಿಕ ಮಂದಿರಗಳು ಸಹ ತೆರೆದಿವೆ.
ಇದರ ಮಧ್ಯೆ ಲಾಕ್ ಡೌನ್ ಸಡಿಲಿಕೆ ಬಳಿಕ ಕೊರೊನಾ ಸೋಂಕಿನ ಪ್ರಮಾಣ ಭಾರೀ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ಮತ್ತೆ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ ಈ ವದಂತಿಯನ್ನು ಸ್ಪಷ್ಟವಾಗಿ ನಿರಾಕರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಮತ್ತೆ ಲಾಕ್ ಡೌನ್ ಜಾರಿ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಬದಲಾಗಿ ಮತ್ತಷ್ಟು ಸಡಿಲಿಕೆಗಳನ್ನು ಮಾಡುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಚರ್ಚಿಸುವುದಾಗಿ ಹೇಳಿರುವ ಹಿನ್ನಲೆಯಲ್ಲಿ ಚಿತ್ರಮಂದಿರ, ಈಜುಕೊಳ, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಜಿಮ್ ಕೂಡಾ ಆರಂಭವಾಗುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಬಹುತೇಕ ಕಂಪ್ಲೀಟ್ ಅನ್ ಲಾಕ್ ಮಾಡುವತ್ತ ಸರ್ಕಾರ ಒಲವು ತೋರಿದೆ.
ಲಾಕ್ ಡೌನ್ ಸಡಿಲಿಕೆ ಬಳಿಕವೂ ರಾಜ್ಯ ಸರ್ಕಾರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಾರದಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.