ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದೆ. ಅದರಲ್ಲೂ ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಸೋಂಕಿತರ ಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದ್ದು, ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 7213 ಕ್ಕೆ ತಲುಪಿದೆ.
ಕೊರೊನಾ ನಿಯಂತ್ರಣಕ್ಕೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು, ಪೊಲೀಸರು ನಿರಂತರವಾಗಿ ಶ್ರಮಿಸುತ್ತಿದ್ದು, ಇದರ ಮಧ್ಯೆ ಎಎಸ್‌ಐ ಒಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿರುವುದು ಆತಂಕ ತರಿಸಿದೆ.
ಬೆಂಗಳೂರಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿದ್ದವರು ಸಾವನ್ನಪ್ಪಿದ್ದಾರೆಂದು ಹೇಳಲಾಗಿದ್ದು, ಇವರು ಈ ಹಿಂದೆ ಕೊರೊನಾ ಸೋಂಕು ಪೀಡಿತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿದ್ದರೆನ್ನಲಾಗಿದೆ.
ಹೃದಯಾಘಾತಕ್ಕೊಳಗಾಗಿದ್ದ ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೂನ್ 13 ರಂದು ವಿಧಿವಶರಾಗಿದ್ದರು. ಮೃತರ ಶವ ಪರೀಕ್ಷೆ ವೇಳೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎನ್ನಲಾಗಿದ್ದು, ಇದು ಇವರ ಜೊತೆ ಕಾರ್ಯ ನಿರ್ವಹಿಸಿದ್ದ ಇತರೆ ಸಿಬ್ಬಂದಿಗೆ ಆತಂಕ ತಂದೊಡ್ಡಿದೆ.