ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿಗೆ ಇಂದು ಕೂಡ ಜಾಮೀನು ಭಾಗ್ಯ ಸಿಕ್ಕಿಲ್ಲ. ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿ ಎನ್ ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ, ತಮಗೆ ಜಾಮೀನು ನೀಡುವಂತೆ ಕೋರಿ ಎನ್ ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣ ಸಂಬಂಧ ಹೊಸ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಗೆ ಕಾಲಾವಕಾಶ ಕೋರಿದ್ದಾರೆ. ಈ ಹಿನ್ನಲೆಯಲ್ಲಿ ವಿಶೇಷ ನ್ಯಾಯಾಲಯ ಸೆ.19ಕ್ಕೆ ರಾಗಿಣಿ ಅವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿ ಆದೇಶ ನೀಡಿದೆ.
ಇದೇ ವೇಳೆ ಡ್ರಗ್ಸ್ ಪ್ರಕರಣದ ಇನ್ನಿತರ ಆರೋಪಿಗಳಾದ ರಾಹುಲ್ ತೋನ್ಸೆ, ಶಿವಪ್ರಕಾಶ್, ವಿನಯ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಕೂಡ ಎನ್ ಡಿಪಿಎಸ್ ವಿಶೇಷ ನ್ಯಾಯಾಲಯ ಸೆ.19ಕ್ಕೆ ಮುಂದೂಡಿದೆ.