ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಎಂಬುದು ಈವರೆಗೆ ಪ್ರಹಸನದಂತಾಗಿದ್ದು, ಈ ಬಾರಿ ಕೊರೊನಾ ಕಾರಣಕ್ಕೆ ವರ್ಗಾವಣೆ ನಡೆಯುವುದೋ ಇಲ್ಲವೋ ಎಂಬ ಗೊಂದಲ ಮೂಡಿತ್ತು. ಕೊನೆಗೂ ಇದಕ್ಕೆ ತೆರೆ ಬಿದ್ದಿದೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಕರ ವರ್ಗಾವಣೆ ಕುರಿತಂತೆ ಸಿಹಿ ಸುದ್ದಿ ನೀಡಿದ್ದು, ವರ್ಗಾವಣಾ ನಿಯಮಗಳನ್ನು ಶಿಕ್ಷಣ ಇಲಾಖೆಯು ಅಂತಿಮಗೊಳಿಸಿದೆ ಎಂದು ತಿಳಿಸಿದ್ದಾರೆ.
ಶಿಕ್ಷಕ ಸ್ನೇಹಿಯಾದ, ಶಿಕ್ಷಣ ಸ್ನೇಹಿಯಾದ ವರ್ಗಾವಣಾ ನೀತಿಯು ಅನುಷ್ಠಾನಗೊಳ್ಳುವ ಸಮಯ ಸನ್ನಿಹಿತವಾಗಿದ್ದು, ಇಂದು ಅಧಿಕಾರಿಗಳ ಸಭೆ ನಡೆಸಿ ಕೂಡಲೇ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬೇಕೆಂದು ಸೂಚನೆ ನೀಡಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
ಕಳೆದ ಬಾರಿ ಕಡ್ಡಾಯ ವರ್ಗಾವಣೆಯಿಂದ ತೊಂದರೆಗೀಡಾಗಿದ್ದ ಶಿಕ್ಷಕರು ಈ ಬಾರಿಯ ಮೊದಲ ಆದ್ಯತೆಯ ವರ್ಗಾವಣೆಯನ್ನು ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.