ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಗಳು ನಿಗದಿತ ದಿನಾಂಕಗಳಂದೇ ನಡೆಯಲಿವೆ.
ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥನಾರಾಯಣ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ಈ ಮಾಹಿತಿ ನೀಡಿದ್ದಾರೆ.
ಸಿಇಟಿ ಪರೀಕ್ಷೆಗಳು ಈ ಹಿಂದೆ ನಿಗದಿಯಾಗಿದ್ದಂತೆ ಜುಲೈ 30 ಹಾಗೂ 31 ರಂದು ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ.
ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಸಿಇಟಿ ಘಟಕ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಸಚಿವರು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದಾರೆ
ಪಿಜಿ ಸಿಇಟಿ ಆಗಸ್ಟ್ 8 ಮತ್ತು 9 ನಡೆಯಲಿದೆ. ಆಗಸ್ಟ್ 9 ರಂದು ಡಿಪ್ಲೋಮಾ ಸಿಇಟಿ ನಡೆಯಲಿದೆ ಹಾಗೂ ಕೆ-ಸೆಟ್ ಪರೀಕ್ಷೆಗಳ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಪರೀಕ್ಷೆ ತಡ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ ಎಂಬ ಹಿನ್ನಲೆಯಲ್ಲಿ ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಪರೀಕ್ಷಾ ಸಂದರ್ಭದಲ್ಲಿ ಸಮರ್ಪಕ ಸ್ಯಾನಿಟೈಸೇಷನ್ ಮತ್ತು ಸಾಮಾಜಿಕ ಅಂತರಕ್ಕೆ ಧಕ್ಕೆ ಆಗದ ಹಾಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.