ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್ ಅಧ್ಯಕ್ಷತೆಯಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ಶಾಲೆಗಳನ್ನು ಪುನರಾರಂಭಿಸುವ ಕುರಿತು ಚರ್ಚೆ ನಡೆದಿದ್ದು, ಅಂತಿಮವಾಗಿ ಸದ್ಯಕ್ಕೆ ಶಾಲೆ ತೆರೆಯುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಡಲಾಗಿದೆ.
ಚಳಿಗಾಲ ಆರಂಭವಾಗಿರುವುದರಿಂದ ಕೋವಿಡ್ ಸೋಂಕು ಹರಡುವಿಕೆ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ತೀವ್ರವಾಗಿ ಬಾಧಿಸುತ್ತದೆ. ಅಲ್ಲದೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಈ ಎಲ್ಲ ಕಾರಣದಿಂದ ಡಿಸೆಂಬರ್ ನಲ್ಲಿ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ. ಕೋವಿಡ್ ಪರಿಸ್ಥಿತಿ ನೋಡಿಕೊಂಡು ಡಿಸೆಂಬರ್ 2 ನೇ ವಾರದಲ್ಲಿ ಶಾಲೆಗಳನ್ನು ತೆರೆಯಲು ಮತ್ತೆ ನಿರ್ಧಾರ ಕೈಗೊಳ್ಳಬಹುದು ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.