ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಿರುವ ಕಾರಣ ರಾಜ್ಯದಲ್ಲಿ ಧಾರ್ಮಿಕ ಮಂದಿರಗಳು ಭಕ್ತರಿಗಾಗಿ ತೆರೆಯಲ್ಪಟ್ಟಿವೆ. ಹೀಗಾಗಿ ದೇವಾಲಯಗಳಲ್ಲಿ ಎಂದಿನಂತೆ ಪೂಜೆ ಪುನಸ್ಕಾರಗಳು ನಡೆದಿದ್ದು, ಮೈಸೂರಿನ ಚಾಮುಂಡೇಶ್ವರಿ ದರ್ಶನದ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತಿದ್ದ ಆಷಾಡ ಮಾಸ ಆಚರಣೆಗೆ ಈ ಬಾರಿ ಸಾರ್ವಜನಿಕ ಪ್ರವೇಶ ಇಲ್ಲವೆಂದು ತಿಳಿಸಲಾಗಿದ್ದು, ಈ ಮಾಸದಲ್ಲಿ ಬರುವ ಪ್ರತಿ ಶುಕ್ರವಾರದಿಂದ ಭಾನುವಾರದವರೆಗೆ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಜೂನ್ 26 ರಿಂದ ಆಷಾಡ ಶುಕ್ರವಾರ ಪ್ರಾರಂಭವಾಗಲಿದೆ. ಜುಲೈ 03, ಜುಲೈ 10 ಹಾಗೂ ಜುಲೈ 17ರಂದು ಪೂಜೆ ಪುನಸ್ಕಾರಗಳು ನಡೆಯಲಿದೆ. ಆದರೆ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪ್ರವೇಶ ನಿರಾಕರಣೆ ಮಾಡಲಾಗುತ್ತಿದೆ. ಜೊತೆಗೆ ವರ್ಧಂತಿ ಉತ್ಸವಕ್ಕೂ ಸಾರ್ವಜನಿಕ ಪ್ರವೇಶ ಇರುವುದಿಲ್ಲ. ಉಳಿದ ದಿನಗಳಲ್ಲಿ ತಾಯಿಯ ದರ್ಶನ ಪಡೆಯಬಹುದಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.