ಬಳ್ಳಾರಿ: ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಸರ್ಕಾರದ ನಿರ್ಧಾರಕ್ಕೆ ಸ್ವಪಕ್ಷೀಯ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಶಾಸಕ ಸೋಮಶೇಖರ ರೆಡ್ಡಿ, ಬಳ್ಳಾರಿಯನ್ನು ಡಿವೈಡ್ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಮೊಂಡುತನಕ್ಕೆ ಏನನ್ನಬೇಕೋ ಗೊತ್ತಾಗುತ್ತಿಲ್ಲ. ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಎರಡು ಜಿಲ್ಲೆಗಳನ್ನಾಗಿ ಮಾಡುವ ಸರ್ಕಾರದ ಕ್ರಮ ಸರಿಯಲ್ಲ. ಈ ಹಿಂದೆಯೇ ನಾನು ಮುಖ್ಯಮಂತ್ರಿಗಳಿಗೆ ಜಿಲ್ಲೆ ವಿಭಜನೆ ಮಾಡಬಾರದು ಎಂದು ಮನವಿ ಮಾಡಿದ್ದೆ. ಮತ್ತೆ ನಾನು ಹೋಗಿ ಮನವಿ ಮಾಡಲಾರೆ ಎಂದರು.
ಅಖಂಡ ಜಿಲ್ಲೆಯನ್ನು ವಿಭಜನೆ ಮಾಡುವುದರಿಂದ ಜನರೇ ತಕ್ಕ ಪಾಠ ಕಲಿಸುತ್ತಾರೆ. ನನಗೆ ಪಕ್ಷಕ್ಕಿಂತ ಜನತೆ ಮುಖ್ಯ. ಜನರು ಪ್ರತಿಭಟನೆ ಹೋರಾಟ ನಡೆಸಿದರೆ ನಾನು ಅವರ ಪರ ನಿಲ್ಲುತ್ತೇನೆ ಎಂದು ತಿಳಿಸಿದರು.