ಬೆಂಗಳೂರು: ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸ್ಥಳೀಯ ನಿವಾಸಿಗಳು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ತಮ್ಮ ಸಂಕಷ್ಟವನ್ನು ಆಲಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಸುಬ್ರಹ್ಮಣ್ಯಪುರಂ ನ ನ್ಯೂ ಸಪ್ತಗಿರಿ ಲೇಔಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪನವರಿಗೆ, ಖುದ್ದು ಮನೆಯ ಒಳಗೆ ಬಂದು ಪರಿಶೀಲನೆ ನಡೆಸಿ ಆಗ ನಮ್ಮ ಸಂಕಷ್ಟದ ಅರಿವಾಗಲಿದೆ. ಬರೀ ಇದೇ ಆಯ್ತು… ಕಾರಿನಲ್ಲಿ ಹೊರಗಡೆಗೆ ಬಂದು ಪರಿಶೀಲನೆ ನಡೆಸಿ ಹೋದರೆ ನಮ್ಮ ಕಷ್ಟದ ಅರಿವಾಗುವುದು ಹೇಗೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಅಲ್ಲದೇ ಪ್ರತೀ ವರ್ಷ ಮಳೆ ಬಂದಾಗಲೂ ಚರಂಡಿ ಹಾಗೂ ರಾಜಕಾಲುವೆಗಳ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಈಗಾಗಲೇ ಹಲವು ಬಾರಿ ಈ ಭಾಗದ ಜನಪ್ರತಿನಿಧಿಗಳಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದೇವೆ. ಆದರೆ ಸಚಿವರು, ಶಾಸಕರು ಸ್ಥಳಕ್ಕೆ ಬಂದು ಭರವಸೆ ನೀಡಿ ಹೋಗುತ್ತಾರೆ. ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನವನ್ನೂ ಹರಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.