ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳ ಮೂಲಕ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ಪಡೆದು 31 ಜನವರಿ 2020ಕ್ಕೆ ಸುಸ್ತಿಯಾಗಿರುವ ರೈತರ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿತ್ತು.
ಇದರ ಮಧ್ಯೆ ಕೊರೋನಾ ಮಹಾಮಾರಿ ವಕ್ಕರಿಸಿಕೊಂಡ ಪರಿಣಾಮ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದು, ಇದರಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾದ ಪರಿಣಾಮ ಬಡ್ಡಿ ಮನ್ನಾ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗಿರಲಿಲ್ಲ.
ಹೀಗಾಗಿ ರಾಜ್ಯ ಸರ್ಕಾರ, ರೈತರಿಗೆ ಅನುಕೂಲವಾಗುವಂತೆ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವ ಯೋಜನೆಯನ್ನು 30 ಜೂನ್ 2020ರ ವರೆಗೆ ವಿಸ್ತರಿಸಿತ್ತು. ಇದು ಅಂತಿಮ ಗಡುವು ದಿನಾಂಕವಾಗಿದ್ದು, ಮತ್ತೊಮ್ಮೆ ವಿಸ್ತರಣೆ ಮಾಡುವ ಸಾಧ್ಯತೆ ಇಲ್ಲ. ರೈತರು ಅವಧಿಯೊಳಗೆ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಿದೆ.