ಮಂಗಳೂರು: ಬಡಪಾಯಿ ಡಿ ಗ್ರೂಪ್ ನೌಕರರ ಮೇಲೆ ಕೊರೊನಾ ಲಸಿಕೆ ಪ್ರಯೋಗ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಚಿವ ಯು.ಟಿ. ಖಾದರ್, ಮೊದಲು ಮಂತ್ರಿಗಳು, ಶಾಸಕರು ಲಸಿಕೆಯನ್ನು ಹಾಕಿಸಿಕೊಳ್ಳಲಿ ಎಂದಿದ್ದಾರೆ.
ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಅದನ್ನು ಬಡಪಾಯಿ ಡಿ ಗ್ರೂಪ್ ನೌಕರರ ಮೇಲೆ ಮೊದಲು ಪ್ರಯೋಗಿಸುತ್ತಿರುವುದು ವಿಷಾದನೀಯ. ಬೇರೆ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಲು ಆಡಂಬರದಿಂದ ಹೋಗುವ ಮಂತ್ರಿಗಳು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಮೊದಲು ಲಸಿಕೆ ಪಡೆದು ಮಾದರಿಯಾಗಬೇಕು ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಯು.ಟಿ ಖಾದರ್, ಬೇರೆ ಕಾರ್ಯಕ್ರಮಗಳಲ್ಲಿ ನಾ ಮುಂದು ತಾ ಮುಂದು ಎಂದು ಹೋಗುವ ಮಂತ್ರಿಗಳು ಲಸಿಕೆ ವಿಚಾರದಲ್ಲಿ ಹಿಂದೆ ಸರಿಯುತ್ತಿರುವುದೇಕೆ? ಈ ವಿಷಯದಲ್ಲೂ ಮೊದಲು ಲಸಿಕೆ ಪಡೆದು ಮಾದರಿಯಾಗಲಿ ಎಂದು ಹೇಳಿದ್ದಾರೆ.