ಬೆಂಗಳೂರು: ಆಲ್ ಇಂಡಿಯಾ ಕಿಸಾನ್ ಕಮಿಟಿ ಕರೆ ನೀಡಿದ್ದ ಸೆ.25ರ ಭಾರತ್ ಬಂದ್ ಗೆ ನಮ್ಮ ಬೆಂಬಲವಿದೆ. ಆದರೆ ರಾಜ್ಯದಲ್ಲಿ ಬಂದ್ ಇಲ್ಲ, ರಾಜ್ಯ ಹಾಗೂ ರಾಷ್ಟ್ರ ಹೆದ್ದಾರಿ ತಡೆದು ಪ್ರತಿಭಟನೆಗೆ ನಿರ್ಧಾರ ಕೈಗೊಂಡಿರುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯಿದೆಗೆ ನಮ್ಮ ವಿರೋಧವಿದೆ. ಈ ಕಾಯಿದೆಗಳನ್ನು ಜಾರಿಗೆ ತರುವ ಮೂಲಕ ರೈತರ ಭೂಮಿಯನ್ನು ಕಂಪನಿಗಳಿಗೆ ಕೊಡುವ ಹುನ್ನಾರ ನಡೆದಿದೆ. ಹೀಗಾಗಿ ಕಿಸಾನ್ ಕಮಿಟಿ ನಡೆಸುವ ಭಾರತ್ ಬಂದನ್ನು ಬೆಂಬಲಿಸುತ್ತೇವೆ. ಆದರೆ ಕರ್ನಾಟಕದಲ್ಲಿ ಯಾವುದೇ ಬಂದ್ ಇರುವುದಿಲ್ಲ. ಪ್ರತಿಭಟನೆ ಮಾತ್ರ ನಡೆಯಲಿದೆ ಎಂದರು.
ಕೊರೊನಾ ಲಾಕ್ ಡೌನ್ ನಿಂದಾಗಿ ಈಗಾಗಲೇ ಮೂರ್ನಾಲ್ಕು ತಿಂಗಳು ಜನ ಸಾಮಾನ್ಯರು ಬಂದ್ ಸಂಕಷ್ಟ ಅನುಭವಿಸಿದ್ದಾರೆ. ಈಗ ಮತ್ತೆ ಬಂದ್ ಮಾಡುವುದರಿಂದ ತೊಂದರೆಯಾಗಲಿದೆ. ಹೀಗಾಗಿ ಸೆ.25ರಂದು ಬಂದ್ ಬದಲಾಗಿ ರೈತರು, ರೈತ ಸಂಘಟನೆಗಳು ಜೈಲ್ ಭರೋ ಚಳುವಳಿ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವುದಾಗಿ ತಿಳಿಸಿದರು.
ಹಳಿ ಹಳ್ಳಿಗಳಲ್ಲೂ ರೈತರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಬೇಕು. ಈ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಭೂ ಸುಧಾರಣೆ, ಎಪಿಎಂಸಿ ಕಾಯಿದೆಗಳನ್ನು ವಿರೋಧಿಸಬೇಕು ಎಂದು ಹೇಳಿದರು.