ಸಾಮಾಜಿಕ ಜಾಲತಾಣಗಳು ಹೆಚ್ಚಾದಂತೆ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಅನ್ನೋದು ಗೊತ್ತಿರುವ ವಿಚಾರವೇ. ಅನೇಕ ಮಂದಿ ಆನ್ ಲೈನ್‌ನಲ್ಲಿ ಚಾಟ್ ಮಾಡುತ್ತಾ ಪ್ರೀತಿಯ ಬಲೆಯಲ್ಲಿ ಸಿಲುಕಿ ಜೀವ – ಜೀವನವನ್ನೇ ಕಳೆದುಕೊಂಡಿರುವುದನ್ನು ನೋಡಿದ್ದೇವೆ. ಇದೀಗ ಇಂತಹದ್ದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಹೌದು, ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಹುಡುಗನಿಗಾಗಿ ಮನೆಬಿಟ್ಟು ಹೋಗಲು ರೆಡಿಯಾಗಿದ್ದ 14ರ ಬಾಲೆಯೊಬ್ಬಳು ತನ್ನ ತಂದೆಯ ಕೈಗೆ ಸಿಕ್ಕಾಕಿಕೊಂಡಿದ್ದಾಳೆ. ಹೈದರಾಬಾದ್ ಮೂಲದ ವಿಶಾಲ್ ಎಂಬಾತನ ಜೊತೆ ಆನ್‌ಲೈನ್‌ನಲ್ಲಿ ಪರಿಚಯ ಮಾಡಿಕೊಂಡ ಬೆಂಗಳೂರಿನ ಬಾಲೆ, ಯುವಕನನ್ನು ನಂಬಿ ಹೈದರಾಬಾದ್‌ಗೆ ಹಾರಲು ರೆಡಿಯಾಗಿದ್ದಳು.
ಆದರೆ ಮಗಳ ಚಟುವಟಿಕೆ ಬಗ್ಗೆ ಮೊದಲೇ ಅನುಮಾನಗೊಂಡಿದ್ದ ಅವಳ ತಂದೆ, ಆಕೆಯ ಸಾಮಾಜಿಕ ಜಾಲತಾಣವನ್ನು ಪರೀಕ್ಷಿಸಿದಾಗ ಆಕೆಗೆ ಹೈದರಾಬಾದ್‌ಗೆ ಹೋಗಲು ವಿಮಾನದ ಟಿಕೆಟ್ ಬುಕ್ ಆಗಿರುವ ಮಾಹಿತಿ ನೋಡಿದ್ದಾರೆ. ತಕ್ಷಣ ಎಚ್ಚೆತ್ತ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ. ವಿಮಾನಕ್ಕಾಗಿ ಕಾಯುತ್ತಾ ಕುಳಿತಿದ್ದ ಮಗಳನ್ನು ವಾಪಸ್ ಕರೆ ತಂದಿದ್ದಾರೆ. ಇನ್ನು ವಿಶಾಲ್ ಎಂಬಾತ ವ್ಯಕ್ತಿ ಈ ಹುಡುಗಿಯ ನಕಲಿ ಎಸ್‌ಎಸ್‌ಎಲ್ಸಿ ಅಂಕಪಟ್ಟಿ ರೆಡಿ ಮಾಡಿಸಿದ್ದ ಎಂದು ಹೇಳಲಾಗಿದೆ. ಈಗ ವಿಶಾಲ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ.