
ಪ್ರಧಾನಿ ನರೇಂದ್ರ ಮೋದಿಯವರು ದೇವಮಾನವರಿದ್ದಂತೆ. ಅವರೊಬ್ಬ ರಾಜ ಋಷಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಡಿ ಹೊಗಳಿದ್ದಾರೆ. ಅಲ್ಲದೆ ಮೋದಿಯವರೊಂದಿಗಿನ ತಮ್ಮ ಇತ್ತೀಚಿಗಿನ ಭೇಟಿಯನ್ನು ಸ್ಮರಿಸಿಕೊಂಡಿರುವ ಯಡಿಯೂರಪ್ಪ, ಈ ಸಂದರ್ಭದಲ್ಲಿ ಮೋದಿಯವರು ಆತ್ಮೀಯತೆಯಿಂದ ಮಾತನಾಡಿದ್ದು ಇದು ನನ್ನ ಸೌಭಾಗ್ಯ ಎಂದು ಬಣ್ಣಿಸಿದ್ದಾರೆ.
ಮೋದಿಯವರ ಜನ್ಮದಿನದ ಪ್ರಯುಕ್ತ ಹುಬ್ಬಳ್ಳಿಯಲ್ಲಿ ನಡೆದ ಸೇವಾ ಸಪ್ತಾಹ ವರ್ಚುವಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧೀಮಂತ ವ್ಯಕ್ತಿತ್ವ ಹೊಂದಿರುವ ಮೋದಿಯವರ ನಾಯಕತ್ವದಿಂದಾಗಿ ದೇಶದ ಅಭಿವೃದ್ಧಿಯ ಚಿತ್ರಣವೇ ಬದಲಾಗುತ್ತಿದೆ. ವಿಶ್ವದ ನಾಯಕರುಗಳು ಬೆರಗುಗಣ್ಣುಗಳಿಂದ ಭಾರತದತ್ತ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ದೆಹಲಿ ಭೇಟಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮಾದರಿಯಲ್ಲಿ ಬೆಂಗಳೂರು ಅಭಿವೃದ್ಧಿಪಡಿಸುವ ಕುರಿತಂತೆ ಬಹಳಷ್ಟು ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ ಕೆಲ ಪ್ರಮುಖರ ದೂರವಾಣಿ ಸಂಖ್ಯೆಯನ್ನೂ ನೀಡಿದ್ದು ಈ ನಿಟ್ಟಿನಲ್ಲಿ ಅವರುಗಳ ಸಹಕಾರ ಪಡೆಯುವಂತೆ ತಿಳಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.