ಇತ್ತೀಚೆಗಷ್ಟೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದೆ. ಕೊರೊನಾ ಸಮಯದಲ್ಲೂ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಪಾಸಾಗಿದ್ದಾರೆ.
ಅನೇಕ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಈ ಬಾರಿ ಪರೀಕ್ಷೆ ನಡೆಸಲಾಗಿದೆ. ಇದರ ನಡುವೆ ಶ್ರೀರಂಗಪಟ್ಟಣದ ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬರು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಆದರೆ ಫೇಲ್ ಆಗಿದ್ದು ಹೇಗೆ ಎಂಬುದು ಅಚ್ಚರಿಗೆ ಕಾರಣವಾಗಿದೆ.
ಹೌದು, ಶ್ರೀರಂಗಪಟ್ಟಣ ತಾಲೂಕಿನ ತರೀಪುರ ಗ್ರಾಮದ ವಿನಾಯಕ ಫ್ರೌಡಶಾಲೆಯ ವಿದ್ಯಾರ್ಥಿನಿ ಅಶ್ವಿನಿ ಎಂಬವರೆ ಪ್ರತಿಭಾನ್ವಿತ ವಿದ್ಯಾರ್ಥಿನಿ. ಯಾವುದೇ ವಿಷಯದಲ್ಲೂ ಫೇಲ್ ಆಗುವ ಪ್ರಮೇಯವೇ ಇರದ ಈ ಹುಡುಗಿ ಮೂರು ವಿಷಯದಲ್ಲಿ ಅನುತ್ತೀರ್ಣಳಾಗಿದ್ದಾಳೆ. ಕನ್ನಡದಲ್ಲಿ ಕೇವಲ 4 ಅಂಕ, ಸಮಾಜ ವಿಜ್ಞಾನದಲ್ಲಿ 7 ಅಂಕ ಹಾಗೂ ಹಿಂದಿಯಲ್ಲಿ 33 ಅಂಕ ಬಂದಿವೆ. ಇಷ್ಟು ಕಡಿಮೆ ಅಂಕ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ವಿದ್ಯಾರ್ಥಿನಿ, ಅವಳ ಪೋಷಕರು, ಶಾಲೆ ಶಿಕ್ಷಕರಿಗೂ ಮೂಡಿದೆ. ಹೀಗಾಗಿ ಉತ್ತರ ಪತ್ರಿಕೆ ನಕಲು ಪ್ರತಿಗೆ ಅರ್ಜಿ ಹಾಕಿ, ಉತ್ತರ ಪತ್ರಿಕೆ ತರಿಸಿಕೊಂಡು ನೋಡಿದಾಗ ಶಾಕ್ ಒಂದು ಕಾದಿತ್ತು.
ಮೊದಲ ಹಾಗೂ ಕೊನೆಯ ಹಾಳೆ ಹೊರತುಪಡಿಸಿದರೆ, ಉಳಿದೆಲ್ಲವೂ ಬೇರೆ ಹಾಳೆಗಳನ್ನು ಇವರ ಉತ್ತರ ಪತ್ರಿಕೆಯಲ್ಲಿ ಸೇರಿಸಲಾಗಿದೆ. ಮೂರು ವಿಷಯಗಳ ಉತ್ತರ ಪತ್ರಿಕೆಯಲ್ಲಿಯೂ ಹಾಳೆಗಳು ಬದಲಾಗಿವೆ. ಹೀಗಾಗಿ ವಿದ್ಯಾರ್ಥಿನಿ ಹಾಗೂ ಪೋಷಕರು ಕಂಗಾಲಾಗಿದ್ದಾರೆ. ಯಾರೋ ಮಾಡಿದ ಲೋಪದಿಂದಾಗಿ ವಿದ್ಯಾರ್ಥಿನಿ ಪರಿತಪಿಸುವಂತಾಗಿದೆ.