ಕುವೆಂಪು ರಚಿತ ನಾಡಗೀತೆಯ ಸಾಲುಗಳನ್ನು ತಿರುಚಿದ್ದಾರೆಂದು ಆರೋಪಿಸಿ ಜಯನಗರ ಶಾಸಕಿ ವಿರುದ್ಧ ಜಯನಗರದ ಸಂಗಮ್ ಸರ್ಕಲ್ ಬಳಿ ನಿನ್ನೆ ಬಿಜೆಪಿ ಮುಖಂಡರು ಹಾಗೂ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಸೌಮ್ಯ ರೆಡ್ಡಿ ಬೆಂಬಲಿಗರು ಹಾಕಿದ್ದ ಬ್ಯಾನರ್‌ನ ಹರಿದು ಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು.
ʼಓ ಕರ್ನಾಟಕ ಹೃದಯ ಶಿವʼ ಇರಬೇಕಾದ ಸಾಲಿನಲ್ಲಿ ʼಓ ಕರ್ನಾಟಕ ಹೃದಯ ಯೇಸುʼ ಎಂಬ ಸಾಲುಗಳನ್ನು ಹಾಕಲಾಗಿದೆ. ಜಯನಗರದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾಗಿದೆ. ನಮ್ಮದು ಜಾತ್ಯಾತೀತ ರಾಷ್ಟ್ರವೇ ಹಾಗಂತ ಮನಸ್ಸಿಗೆ ಬಂದ ರೀತಿ ವರ್ತಿಸುವುದು ಎಷ್ಟು ಸರಿ. ಶಾಸಕಿ ಸೌಮ್ಯ ರೆಡ್ಡಿ ಹಾಗೂ ಅವರ ಬೆಂಬಲಿಗರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದೇವೆ. ಪೊಲೀಸರು ಕೂಡ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ನಿನ್ನೆ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ, ನನಗೆ ಆಹ್ವಾನ ಬಂದಿದ್ದು ನಿಜ. ಆದರೆ ನಾನು ಆಗ ಆಹ್ವಾನ ಪತ್ರಿಕೆ ನೋಡಿರಲಿಲ್ಲ. ನಾನು ನೋಡಿದ ನಂತರ ಇದನ್ನು ಬದಲಾಯಿಸಿ. ಇಲ್ಲ ಅಂದರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂತಲೂ ಹೇಳಿದ್ದೆ. ನಂತರ ಅನ್ನು ಬದಲಾಯಿಸಲಾಗಿದೆ. ಆದರೆ ಬಿಜೆಪಿ ಮುಖಂಡರು ಬೇಕು ಅಂತ ಹೀಗೆಲ್ಲ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಎಲ್ಲರು ಒಟ್ಟಿಗೆ ಸೇರಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗೋಣ ಎಂದು ಹೇಳಿದ್ದಾರೆ.