ಬೆಂಗಳೂರು: ಉದ್ಯಮಿ ಪುತ್ರನ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯವಾಗಿದ್ದು, ಬಾಲಕನನ್ನು ರಕ್ಷಿಸಿ, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಭಾರತಿನಗರದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಉದ್ಯಮಿ ಮೊಹಮ್ಮದ್ ಸಾದಿಕ್ ಮತ್ತು ಉಸ್ಮಾ ದಂಪತಿಯ 11 ವರ್ಷದ ಬಾಲಕನನ್ನು ಕಿರಾತಕರು ಕಿಡ್ನ್ಯಾಪ್ ಮಾಡಿದ್ದರು. ಬಳಿಕ ಆತನ ಪೋಷಕರಿಗೆ ಕರೆ ಮಾಡಿ 2 ಕೋಟಿ ರೂ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಅಪಹರಣಕಾರರಿಂದ ಕರೆ ಬಂದ ಬಳಿಕ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೂರು ದಾಖಲಿಸಿಕೊಂಡು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕನ ಪತ್ತೆಗಾಗಿ 5 ವಿಶೇಷ ತಂಡಗಳನ್ನು ರಚಿಸಿದ್ದರು. ಪೂರ್ವ ವಿಭಾಗ ಡಿಸಿಪಿ ಡಾ.ಶರಣಪ್ಪ ನೇತೃತ್ವದಲ್ಲಿ ತುಮಕೂರು ಬಳಿ ಕಿಡ್ನ್ಯಾಪರ್ಸ್ ಗಳನ್ನು ಪತ್ತೆ ಹಚ್ಚಿದ್ದು, ಬಾಲಕನನ್ನು ರಕ್ಷಿಸಿದ್ದಾರೆ.
ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅಪಹರಣಕಾರರಿಂದ ಬಚಾವಾಗಿರುವ ಬಾಲಕ ಮತ್ತೆ ಪೋಷಕರ ಮಡಿಲು ಸೇರಿದ್ದಾನೆ.