ಬೆಂಗಳೂರು: ರಾಜ್ಯದಲ್ಲಿ ರೂಪಾಂತರ ಕೊರೊನಾ ಸೋಂಕು ಕಾಲಿಟ್ಟ ಬೆನ್ನಲ್ಲೇ ಆತಂಕ ಹೆಚ್ಚಿದೆ. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಈ ಸೋಂಕು ಹೆಚ್ಚು ಅಪಾಯಕಾರಿಯಾಗಿದೆ ಎಂದು ತಿಳಿದು ಬಂದಿದೆ.
ಬ್ರಿಟನ್ ನಿಂದ ಭಾರತಕ್ಕೆ ಆಗಮಿಸಿರುವ 6 ಜನರಲ್ಲಿ ರೂಪಾಂತರ ಕೊರೊನಾ ಸೋಂಕು ಪತ್ತೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮೂವರಲ್ಲಿ ಈ ವೈರಸ್ ಪತ್ತೆಯಾಗಿದ್ದು, ಸಿಲಿಕಾನ್ ಸಿಟಿ ಜನರ ನಿದ್ದೆಗೆಡಿಸಿದೆ. ರೂಪಾಂತರ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಬೆಂಗಳೂರಿನಲ್ಲಿ ತಾಯಿ ಹಾಗೂ ಮಗುವಿನಲ್ಲಿ ಸೋಂಕು ಪತ್ತೆಯಾಗಿದ್ದು, ಮಕ್ಕಳಲ್ಲಿ ಈ ಸೋಂಕು ಹರಡಿದಲ್ಲಿ ಅಪಾಯಕಾರಿ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತೆ ಅಗತ್ಯವಾಗಿದೆ.
ಹೊಸ ಕೊರೊನಾ ಪ್ರಭೇದ ಪತ್ತೆಯಾದವರಿಗೆ 28 ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕಡ್ಡಾಯವಾಗಿ ನೀಡಬೇಕು. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ನೀಡಬೇಕು. ವಿಶೇಷವಾಗಿ ಮಕ್ಕಳಲ್ಲಿ ಸೋಂಕು ಪತ್ತೆಯಾದಲ್ಲಿ ಅಪಾಯಕಾರಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಅಗತ್ಯವೆಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.