ಬೆಂಗಳೂರು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನೇಕ ಕಾನ್‌ಸ್ಟೆಬಲ್ ಗಳು ತಮ್ಮ ತಮ್ಮ ಜಿಲ್ಲೆಗಳಿಗೆ ಹೋಗಲು ಬಯಸುತ್ತಾರೆ. ಅಂತವರಿಗೊಂದು ಅವಕಾಶ ನೀಡಿದ್ದಾರೆ ನಗರ ಪೊಲೀಸ್ ಆಯುಕ್ತರು. ಆದರೆ ಒಂದಿಷ್ಟು ನಿಯಮಗಳಿದ್ದು ಆ ನಿಯಮದಡಿ ಬರುವವರು ಮಾತ್ರ ಜಿಲ್ಲಾ ವರ್ಗಾವಣೆಗೆ ಒಳಪಡುತ್ತಾರೆ.
ಹೌದು, ಬೆಂಗಳೂರಿನ ನಗರ ಘಟಕದಲ್ಲಿ ಕಾನ್‌ಸ್ಟೆಬಲ್ ಹುದ್ದೆಗೆ ನೇಮಕಾತಿ ಹೊಂದಿ 7 ವರ್ಷ ಆಗಿರಬೇಕು. ಅಥವಾ ಅದಕ್ಕಿಂತ ಮೇಲ್ಪಟ್ಟು ಸೇವೆ ಸಲ್ಲಿಸಿದವರೂ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚಿನ ಅರ್ಜಿಗಳು ಪ್ರಧಾನ ಪೊಲೀಸ್ ಕಚೇರಿಗೆ ಬರುತ್ತಿರುವುದರಿಂದ ಪೊಲೀಸ್ ಆಯುಕ್ತರು ಮರು ಆದೇಶವನ್ನು ಮಾಡಿದ್ದಾರೆ.
ಇನ್ನು ವರ್ಗಾವಣೆ ಬಯಸುವವರು ಕಡ್ಡಾಯವಾಗಿ ಕಾರಣ ನೀಡಬೇಕು. ಅಂದರೆ ಅರ್ಜಿ ಸಲ್ಲಿಸಿದ ವ್ಯಕ್ತಿ ಅವರ ಪತ್ನಿ ಇಬ್ಬರು ಸರ್ಕಾರಿ ಕೆಲಸದಲ್ಲಿದ್ದರೆ ಅಂತವರಿಗೆ ವಿನಾಯ್ತಿ ಸಿಗಲಿದೆ. ಇನ್ನು ವಿಧವಾ ಕಾನ್ಸ್ಟೇಬಲ್‌ಗಳು ಅರ್ಜಿ ಸಲ್ಲಿಸಿದರೂ ವಿನಾಯ್ತಿ ಸಿಗಲಿದೆ. ಇನ್ನು ನಿವೃತ್ತಿ ಹೊಂದಲು ಕೇವಲ 2 ವರ್ಷ ಇದೆ ಎನ್ನುವವರೂ ಅರ್ಜಿ ಹಾಕಬಹುದು. ಇದಲ್ಲದೆ ಅರ್ಜಿ ಸಲ್ಲಿಸಿದ ಕಾನ್‌ಸ್ಟೆಬಲ್‌ನ ಪತ್ನಿ ಅಥವಾ ಮಕ್ಕಳಿಗೆ ಗಂಭೀರ ಕಾಯಿಲೆ ಇದ್ದು, ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲ ಎಂಬುವವರು ಅರ್ಜಿ ಸಲ್ಲಿಸಬಹುದು. ಆದರೆ ವೈದ್ಯಕೀಯ ಮಂಡಳಿ ಶಿಫಾರಸ್ಸು ಅವಶ್ಯಕ.