2025ಕ್ಕೆ ಪೊಲೀಸರಿಗೆ ಮನೆ ನಿರ್ಮಾಣವಾಗಲಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳೂರಿನ ಪಣಂಬೂರಿನಲ್ಲಿ ಪೊಲೀಸ್ ಸಿಬ್ಬಂದಿಗಾಗಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯ ಸಂಕೀರ್ಣ ಉದ್ಘಾಟನೆ ಮಾಡಲಾಯ್ತು.
ಈ ಕಾರ್ಯಕ್ರಮದಲ್ಲಿ ಸಚಿವ ಬಸವರಾಜ್ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಉಡುಪಿ ಶಾಸಕ ರಘುಪತಿ ಭಟ್, ಸ್ಥಳೀಯ ಕಾರ್ಪೊರೇಟರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ಉದ್ಘಾಟನೆ ಮಾಡಿದ ನಂತರ ಪೊಲೀಸರಿಗೆ ಗುಡ್ ನ್ಯೂಸ್ ನೀಡಿದ ಸಚಿವ ಬಸವರಾಜ್ ಬೊಮ್ಮಾಯಿ, ಮುಂದಿನ 5 ವರ್ಷಗಳಲ್ಲಿ ಪೊಲೀಸ್ ಸಿಬ್ಬಂದಿಗಾಗಿ 11 ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಬಜೆಟ್‌ನಲ್ಲಿ ಇದಕ್ಕೆ ಮಂಜೂರಾತಿ ನೀಡಲಾಗಿದೆ. ಮುಂದಿನ ವರ್ಷ ಅಂದರೆ ಜನವರಿಯಿಂದ ಕಾರ್ಯ ಆರಂಭವಾಗಲಿದೆ ಎಂದರು.
ಇನ್ನು, ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಬಗ್ಗೆಯೂ ಮಾತನಾಡಿದ ಅವರು, ಈ ನಿಟ್ಟಿನಲ್ಲಿಯೂ ಚಿಂತಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸ ಕುರಿತು ನೆರವು ನೀಡುವುದು ಮುಖ್ಯವಾಗಿದೆ ಎಂದರು. ಇನ್ನು ಇದೇ ವೇಳೆ ಸಾಂಕೇತಿಕವಾಗಿ ಕೆಲವು ಪೊಲೀಸ್ ಸಿಬ್ಬಂದಿಗೆ ಮನೆಗಳ ಕೀ ಹಸ್ತಾಂತರಿಸಲಾಯ್ತು.