ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಪುನರ್ವಸು ಮಳೆಗೆ ಮಲೆನಾಡು ಜನತೆ ತತ್ತರಿಸಿ ಹೋಗಿದ್ದಾರೆ. ಮನೆಯಿಂದ ಹೊರಗೆ ಬರಲೂ ಬಿಡದಂತೆ ಬಿಟ್ಟು ಬಿಡದೆ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಕೆರೆಕಟ್ಟೆಗಳು, ಜಲಾಶಯಗಳು ತುಂಬಿಕೊಳ್ಳುತ್ತಿವೆ.
ದಕ್ಷಿಣದ ಚಿರಾಪುಂಜಿ ಎಂದೇ ಹೆಸರಾಗಿರುವ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಶುಕ್ರವಾರ ಬೆಳಗ್ಗೆವರೆಗೆ 190 ಮೀ.ಮೀ. ಮಳೆ ದಾಖಲಾಗಿದೆ. ಹೊಸನಗರ ತಾಲೂಕಿನ ಹುಲಿಕಲ್ ನಲ್ಲಿ ಅತಿ ಹೆಚ್ಚು ಅಂದರೆ 127 ಮೀ.ಮೀ. ಮಳೆ ದಾಖಲಾಗಿದೆ.
ಗಾಜನೂರಿನ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ಭದ್ರಾ ಜಲಾಶಯದ ನೀರಿನ ಪ್ರಮಾಣದಲ್ಲಿ ದಿನೇ ದಿನೇ ಏರಿಕೆ ಕಂಡುಬರುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜೋಗ ಜಲಪಾತ ಭೋರ್ಗರೆಯುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.