ಅದೆಷ್ಟೋ ವರ್ಷಗಳ ಹಿಂದೆ ಹುಲಿಗಳ ವಾಸಸ್ಥಾನವಾಗಿದ್ದ ಪಿಲಿಕುಳ (ತುಳುವಿನಲ್ಲಿ ಪಿಲಿ ಎಂದರೆ ಹುಲಿ) ಈಗ ಪ್ರಸಿದ್ಧ ಪ್ರವಾಸಿ ತಾಣ. ಮಂಗಳೂರು – ಮೂಡುಬಿದಿರೆ ರಸ್ತೆಯಲ್ಲಿ 12ಕಿಲೋ ಮೀಟರ್ ಹೋಗುವಾಗ ವಾಮಂಜೂರು ಎಂಬಲ್ಲಿಂದ ಎರಡು ಕಿಲೋ ಮೀಟರ್ ಎಡಕ್ಕೆ ಹೋದರೆ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಪ್ರದೇಶ ಸಿಗುತ್ತದೆ.
ತುಳು ಸಂಸ್ಕೃತಿಯನ್ನು ಬೆಳೆಸುವ, ಉಳಿಸುವ ನೆಲೆಯಲ್ಲಿ ಮಂಗಳೂರು ನಗರದಿಂದ ಹೊರವಲಯದಲ್ಲಿ ವಿಸ್ತಾರವಾದ ಪ್ರದೇಶವಾದ ವಾಮಂಜೂರಿನಲ್ಲಿ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ನಿರ್ಮಾಣವಾಗಿದೆ.
ಕುಶಲಕರ್ಮಿ ಗ್ರಾಮ ಪಿಲಿಕುಳ ನಿಸರ್ಗಧಾಮದ ಒಂದು ಪ್ರಮುಖ ಭಾಗ. ಇಲ್ಲಿ ಅಳಿದು ಹೋಗುವ ತುಳುನಾಡಿನ ಕೃಷಿ ಪರಂಪರೆಯ ಮೂಲ ಕೆಲಸಗಳನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ನೋಡಬಹುದು.
ಈ ಗ್ರಾಮದಲ್ಲಿ ಮಡಿಕೆ ಮಾಡುವವ ಮನೆ(ಕುಂಬಾರ), ಅವಲಕ್ಕಿ ಗುದ್ದುವವರ ಮನೆ, ಮರದ ಕೆಲಸ ಮಾಡುವವರ ಮನೆ(ಬಡಗಿ), ಗಾಣದವರ ಮನೆ(ಗಾಣಿಗ), ಬೆತ್ತ ನೇಯುವವರ ಮನೆ, ಬಟ್ಟೆ ನೇಯುವವರ ಮನೆ(ನೇಕಾರ), ಕಬ್ಬಿಣದ ಆಚಾರಿಗಳ ಮನೆ(ಕಮ್ಮಾರ), ಕಲ್ಲುಕುಟ್ಟಿಗಳ ಮನೆ ಹೀಗೆ ಹಲವು ಮನೆಗಳವರು ಸಂಸಾರ ಸಮೇತ ಬದುಕುತ್ತಿದ್ದಾರೆ. ಇಲ್ಲಿನ ಪ್ರವಾಸಿ ತಾಣಗಳಲ್ಲಿ ಇದೂ ಒಂದು.