ಬೆಂಗಳೂರು: ಕೊರೊನಾ ಸೋಂಕು ಮತ್ತೆ ಹೆಚ್ಚುವ ಸಾಧ್ಯತೆ ಇರುವುದರಿಂದ 2021ರ ಹೊಸ ವರ್ಷಾಚರಣೆ ಸಡಗರ-ಸಂಭ್ರಮಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಚಿಂತನೆ ನಡೆಸಿದೆ.
ಹೊಸ ವರ್ಷಾಚರಣೆ ಎಂದಾಕ್ಷಣ ನೆನಪಾಗುವುದೇ ಬೆಂಗಳೂರಿನ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿನ ಸಂಭ್ರಮಾಚರಣೆ. ಆದರೆ ಈ ಸಂಭ್ರಮಕ್ಕೆ ಇದೀಗ ಬ್ರೇಕ್ ಹಾಕಲು ನಿರ್ಧರಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಹೊಸ ವರ್ಷಾಚರಣೆಯಲ್ಲಿ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಕಿಕ್ಕಿರಿದು ಜನ ಸೇರುತ್ತಾರೆ. ಸಾಮಾಜಿಕ ಅಂತರ ಪಾಲನೆ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಕೋವಿಡ್ ನಿಯಮ ಪಾಲನೆ ಕೂಡ ಸಾಧ್ಯವಿಲ್ಲ. ಹೀಗಾಗಿ ಕೊರೊನಾ ಸೋಂಕು ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಹಾಗೂ ಮೋಜು-ಮಸ್ತಿಗೆ ಕಡಿವಾಣ ಹಾಕಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದರು.
ಈ ಬಗ್ಗೆ ಈಗಾಗಲೇ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ವರದಿ ನೀಡಿದ್ದು, ಸರ್ಕಾರಕ್ಕೂ ಮನವಿ ಮಾಡುವ ಬಗ್ಗೆ ನಿರ್ಧರಿಸಲಾಗಿದೆ ಎಂದರು.