ಸಾರ್ವಜನಿಕ ಸಭೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿ ಕಳೆದ ಮೂರೂವರೆ ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಅಮೂಲ್ಯ ಲಿಯೋನ್ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಅಮೂಲ್ಯ ಅವರನ್ನು ಫೆಬ್ರವರಿ 20ರಂದು ಬಂಧನಕ್ಕೊಳಪಡಿಸಿದ್ದ ಬೆಂಗಳೂರಿನ ಉಪ್ಪಾರಪೇಟೆ ಠಾಣೆ ಪೊಲೀಸರು ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಳಿಕ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
ಆರೋಪಿ ಬಂಧನವಾದ 90 ದಿನಗಳೊಳಗಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕಾಗಿತ್ತಾದರೂ ಅಮೂಲ್ಯ ಅವರ ಪ್ರಕರಣದಲ್ಲಿ ಪೊಲೀಸರು ಅವಧಿ ಮೀರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನೇ ಮುಂದಿಟ್ಟುಕೊಂಡ ಅಮೂಲ್ಯ ಪರ ವಕೀಲರು ಜಾಮೀನು ಮಂಜೂರು ಮಾಡುವಂತೆ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇದೀಗ ಅಮೂಲ್ಯ ಲಿಯೋನ್ ಅವರಿಗೆ ಜಾಮೀನು ದೊರಕಿದೆ.