ಪ್ರಸ್ತುತ ಕೊರೊನಾ ಮಹಾಮಾರಿ ಬೆಂಬಿಡದೆ ಕಾಡುತ್ತಿರುವ ವೇಳೆ ಸಾರ್ವಜನಿಕರೇ ತಮ್ಮ ಸಾಮಾನ್ಯ ಆರೋಗ್ಯ ಪರೀಕ್ಷೆಯನ್ನು ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಲು ಹಿಂದೆ ಮುಂದೆ ನೋಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳು ಅನಾರೋಗ್ಯಕ್ಕೆ ಒಳಗಾದಾಗ ಪಶು ಚಿಕಿತ್ಸಾಲಯಗಳಿಗೆ ಕರೆದುಕೊಂಡು ಹೋಗುವುದು ದುಸ್ತರವಾಗಿತ್ತು.
ಇದೀಗ ರಾಜ್ಯ ಸರ್ಕಾರ ಪಶು ಪಾಲಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಗ್ರಾಮೀಣ ಭಾಗದಲ್ಲಿ ಜಾನುವಾರಗಳಿಗೆ ತ್ವರಿತ ಚಿಕಿತ್ಸೆ ಕಲ್ಪಿಸುವ ಉದ್ದೇಶದಿಂದ ಮೊಬೈಲ್ ಆಂಬುಲೆನ್ಸ್ ಸೇವೆ ಆರಂಭಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆದಿದ್ದು ಶೀಘ್ರದಲ್ಲೇ ಆರಂಭಗೊಳ್ಳಲಿದೆ.
ಪಶುಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ಈ ವಿಷಯ ತಿಳಿಸಿದ್ದು, 108 ಮಾದರಿಯಲ್ಲಿ ವೈದ್ಯಕೀಯ ಚಿಕಿತ್ಸಾ ಉಪಕರಣ ಸಹಿತ ಈ ಮೊಬೈಲ್ ಅಂಬುಲೆನ್ಸ್ ಗಳು ಕಾರ್ಯ ನಿರ್ವಹಿಸಲಿದ್ದು, ಮೊದಲ ಹಂತದಲ್ಲಿ 15 ಜಿಲ್ಲೆಗಳಲ್ಲಿ ಇದು ಅನುಷ್ಠಾನಗೊಳ್ಳುತ್ತಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಇದಕ್ಕೆ ಚಾಲನೆ ಕೊಡಿಸಲಾಗುತ್ತದೆ ಎಂದು ಹೇಳಿದ್ದಾರೆ.