ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದ್ದು, ಪ್ರತಿನಿತ್ಯ 10000ಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಇದರ ಜೊತೆಗೆ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಮತ್ತೆ ಲಾಕ್ಡೌನ್, ನೈಟ್ ಕರ್ಫ್ಯೂ ಮೊದಲಾದ ವಿಚಾರಗಳು ಮುನ್ನೆಲೆಗೆ ಬಂದಿವೆ.
ಕೊರೊನಾ ಮೊದಲನೇ ಅಲೆ ಸಂದರ್ಭದಲ್ಲಿ ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದ ಕಾರಣ ಸಾರ್ವಜನಿಕರು ಆರ್ಥಿಕ ಹೊಡೆತದಿಂದ ತತ್ತರಿಸಿ ಹೋಗಿದ್ದರು. ಕೊರೊನಾ ಶಿಕ್ಷಣ ಕ್ಷೇತ್ರವನ್ನು ಇನ್ನಿಲ್ಲದಂತೆ ಕಾಡಿದೆ. ಕೊರೊನಾ ಕಡಿಮೆಯಾಗಿದೆ ಎಂದು ಸುದೀರ್ಘಾವಧಿಗೆ ಮುಚ್ಚಿದ್ದ ಶಾಲಾ-ಕಾಲೇಜುಗಳು ಆರಂಭವಾಗಿದ್ದು ಪರೀಕ್ಷೆಗಳನ್ನು ಸಹ ನಿಗದಿಪಡಿಸಲಾಗಿತ್ತು. ಇದೀಗ ಎರಡನೇ ಅಲೆ ವಕ್ಕರಿಸಿದ ಪರಿಣಾಮ ಅದಕ್ಕೂ ಗ್ರಹಣ ಬಡಿದಿದೆ.
SSLC – ಪಿಯುಸಿ ಪರೀಕ್ಷೆ ಕುರಿತು ಶಿಕ್ಷಣ ಸಚಿವರಿಂದ ಮಹತ್ವದ ಹೇಳಿಕೆ
ಈಗಾಗಲೇ ಸಿಬಿಎಸ್ಸಿ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿದ್ದು, 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದೇ ರೀತಿ ಏಪ್ರಿಲ್ 19 ರಿಂದ ಆರಂಭವಾಗಬೇಕಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಿಇ, ಬಿ ಟೆಕ್, ಬಿ ಆರ್ಕ್ ಹಾಗೂ ಬಿ ಪ್ಲಾನ್ ಕೋರ್ಸ್ಗಳ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ಈ ಕುರಿತು ಈಗ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಕಟಣೆ ಹೊರಡಿಸಿದ್ದು, ಪರೀಕ್ಷೆಗಳನ್ನು ಮುಂದೂಡಲಾಗಿಲ್ಲ. ಮೊದಲಿನ ವೇಳಾಪಟ್ಟಿಯಂತೆ ಪರೀಕ್ಷೆ ಆರಂಭಗೊಳ್ಳಲಿದೆ ಎಂದು ತಿಳಿಸಲಾಗಿದೆ. ಪರೀಕ್ಷೆ ಮುಂದೂಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ವಿವಿ ಪ್ರಕಟಣೆ ಸ್ಪಷ್ಟನೆ ನೀಡಿದೆ.