ಕೊರೊನಾ ಲಾಕ್ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆಯನ್ನು ಜೂನ್ 18 ರ ಗುರುವಾರದಂದು ನಡೆಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪರೀಕ್ಷೆ ಸಂದರ್ಭದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಇದರ ಮಧ್ಯೆ ಮಲೆನಾಡಿನ ಕುಗ್ರಾಮವೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿಗೆ ಇಂಗ್ಲಿಷ್ ಪರೀಕ್ಷೆಯ ಮಾಹಿತಿಯೇ ಇರಲಿಲ್ಲವೆನ್ನಲಾಗಿದೆ. ಈ ವಿದ್ಯಾರ್ಥಿಯ ಮನೆಯಲ್ಲಿ ಮೊಬೈಲ್, ಟಿವಿ ಇಲ್ಲದ ಕಾರಣ ಪರೀಕ್ಷೆ ನಿಗದಿಯಾಗಿರುವುದು ಹಾಗೂ ಸ್ಥಳದ ಮಾಹಿತಿ ಇರಲಿಲ್ಲ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಗ್ರಾಮ ಇಕ್ಕೇರಿ ಬೇಳೂರಿನ ವಿದ್ಯಾರ್ಥಿ ಅಶ್ವಿತ್ ಈ ವಿದ್ಯಾರ್ಥಿಯಾಗಿದ್ದು ಈತನ ಮಾಹಿತಿ ಪಡೆದ ಸ್ಥಳೀಯರು, ಶಾಸಕ ಆರಗ ಜ್ಞಾನೇಂದ್ರ ಅವರ ನೆರವಿನಿಂದ ತುರ್ತು ವಾಹನ ಸೌಲಭ್ಯ ಕಲ್ಪಿಸಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲೇ ಓದಿಕೊಂಡಿದ್ದ ಕಾರಣ ವಿದ್ಯಾರ್ಥಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದಾನೆ ಎಂದು ಹೇಳಲಾಗಿದೆ.